ವೀರಾಜಪೇಟೆ, ಅ. 24: ವೀರಾಜಪೇಟೆಗೆ ಸಮೀಪದ ಪೆರುಂಬಾಡಿ ಬಳಿಯ ತರ್ಮೆಕಾಡು ಪೈಸಾರಿಯಲ್ಲಿ ಎರಡು ದಿನಗಳ ಹಿಂದೆ ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಕಾಂಕ್ರಿಟ್ ರಸ್ತೆಯ ಮೇಲೆ ಹುಲಿ ಹೆಜ್ಜೆ ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿ ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿ ಹೆಜ್ಜೆಯನ್ನು ಪರಿಶೀಲಿಸಿದ್ದಾರೆ.

ಹೆಜ್ಜೆಯನ್ನು ಪರಿಶೀಲಿಸಿದ ಅರಣ್ಯ ಉಪ ವಲಯದ ಸಹಾಯಕ ಅಧಿಕಾರಿ ಸಚಿನ್ ಅವರು ಇದು ಹುಲಿ, ಕತ್ತೆ ಕಿರುಬ ಇಲ್ಲವೇ ಚಿರತೆಯ ದೆಂದೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಮಟ್ಟಿಗೆ ಹುಲಿ ಹೆಜ್ಜೆ ಇರಬಹುದೆಂದು ಗೋಚರ ವಾಗುತ್ತಿದೆ. ಕೊಡಗು ಕೇರಳ ಗಡಿ ಪ್ರದೇಶದ ಮಾಕುಟ್ಟದ ಅಭಯಾರಣ್ಯ ದಿಂದ ಬಂದಿರುವ ಹುಲಿ ಅಥವಾ ಚಿರತೆ ತರ್ಮೆಕಾಡು ಪೈಸಾರಿಯಲ್ಲಿ ಶಿಬಿರ ಹೂಡಿ ನಿವಾಸಿಗಳು ಸಾಕಿರುವ ಆಡು ಕೋಳಿ ಕುರಿ ಮತ್ತಿತರ ಪ್ರಾಣಿಗಳನ್ನು ಭೇಟೆಯಾಡಲು ತರ್ಮೆಕಾಡು ಪೈಸಾರಿಯಲ್ಲಿ ಸಂಚರಿಸುತ್ತಿರ ಬಹುದೆಂಬ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಅಲ್ಲಿನ ನಿವಾಸಿಗಳಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡಲು ಇಲಾಖೆ ಕ್ರಮ ಕೈಗೊಂಡಿದ್ದು ಹುಲಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ತರ್ಮೆಕಾಡು ಪೈಸಾರಿಯ ಹರೀಶ್ ಎಂಬವರು ಬೆಳಿಗ್ಗೆ 6ಗಂಟೆಯ ಸಮಯದಲ್ಲಿ ಮನೆಗೆ ಕುಡಿಯುವ ನೀರು ತರುತ್ತಿದ್ದಾಗ ಹೆಜ್ಜೆ ಪತ್ತೆಯಾಗಿದೆ.

ಗ್ರಾ.ಪಂ. ಸದಸ್ಯ ಬಿ.ಎಂ. ಗಿರಿ, ತಾ.ಪಂ. ಸದಸ್ಯ ಬಿ.ಎಂ. ಗಣೇಶ್ ಸ್ಥಳ ಪರಿಶೀಲಿಸಿ ನಂತರ ಮಾಕುಟ್ಟ ಉಪ ವಲಯ ಅರಣ್ಯ ಕಚೇರಿಗೆ ದೂರು ನೀಡಿದರು.