ವೀರಾಜಪೇಟೆ, ಅ. 24: ಹೆಣ್ಣೊಬ್ಬಳು ಮನೆಯಿಂದ ಹೊರಗೆ ಬಂದು ಇಂದಿನ ಮುಕ್ತ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರೆ ಸಮಾಜವು ಪ್ರಗತಿಯೊಂದಿಗೆ ಪುರುಷರ ಸರಿ ಸಮಾನವಾಗಿ ಸೇವೆ ಸಲ್ಲಿಸಿದಂತಾಗುವದು. ಇದರಿಂದ ಪುರುಷರೊಂದಿಗೆ ಸೇವೆಯಲ್ಲಿ ಮೇಲುಗೈ ಸಾಧಿಸಲು ಸಾಧ್ಯ ಎಂದು ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ಶಿಕ್ಷಕಿ ಐಚ್ಚೇಟಿರ ವಿನೀತ ಕಾರ್ಯಪ್ಪ ಅಭಿಪ್ರಾಯಪಟ್ಟರು.
ಮೈತಾಡಿ ಗ್ರಾಮದ ಮಂದತಮ್ಮೆ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರದ ಸ್ವಚ್ಛ ಭಾರತದ ಅಂಗವಾಗಿ ಎಲ್ಲ ಗ್ರಾಮಗಳಲ್ಲಿಯೂ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣವಾಗಿ ನಿಷೇಧಿಸುವದರಿಂದ ಸ್ವಚ್ಛತೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು. ಕಾಫಿ ಬೆಳೆಗಾರರಾದ ಮುಂಡಚಾಡಿರ ಭಾನು ಕುಟ್ಟಪ್ಪ ಮಾತನಾಡಿ, ಮಹಿಳಾ ಸಮಾಜ ಅಭಿವೃದ್ಧಿಯನ್ನು ಕಾಣಬೇಕಾದರೆ ಮಹಿಳೆಯರ ಮುಕ್ತ ಸೇವೆ ಒಮ್ಮತ ಅಗತ್ಯ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಅಯ್ಯಮಂಡ ದೇಚಮ್ಮ ಪೂಣಚ್ಚ ಮಾತನಾಡಿ, ಯಾವದೇ ಸಮಾಜವಾಗಲಿ, ಕುಟುಂಬವಾಗಲಿ ಮುನ್ನಡೆಯಲು ಮಹಿಳೆಯರಿಂದ ಸಾಧ್ಯ. ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಮೀನ ಸತೀಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಕುಂಞÂರ ಸ್ವಾತಿ ಸನ್ನಿ ಮಾತನಾಡಿ, ಸಮಾಜದ ಸದಸ್ಯರುಗಳ ಪರಸ್ಪರ ಸಹಕಾರದಿಂದ ಸಮಾಜ ಮುನ್ನಡೆಯಲು ಸಾಧ್ಯವಾಗುತ್ತಿದೆ ಮಹಿಳಾ ಸಮಾಜ ಇನ್ನಷ್ಟು ಅಭಿವೃದ್ಧಿ ಹೊಂದಲು ಎಲ್ಲರ ಸಹಕಾರ ಒಮ್ಮತ ಅಗತ್ಯ ಎಂದರು.
ಚಪ್ಪಂಡ ಲಲಿತ ನಂಜಪ್ಪ, ಐಚ್ಚೇಟಿರ ಕುಸುಮ ವಸಂತ ಪ್ರಾರ್ಥಿಸಿ, ಬಾಳೆಕುಟ್ಟೀರ ಶೀಲಾ ಉತ್ತಯ್ಯ ಸ್ವಾಗತ, ಸಣ್ಣುವಂಡ ಯಶೋದ ಭೀಮಯ್ಯ ವಂದಿಸಿದರು.