ಕೂಡಿಗೆ, ಅ. 24: ಕೂಡಿಗೆಯ ಕೆನರಾ ಬ್ಯಾಂಕಿನಲ್ಲಿ ಮಲ್ಲೇನಹಳ್ಳಿ ಗ್ರಾಮದ ಕೂಲಿ ಕಾರ್ಮಿಕೆ ಪದ್ಮಾ ಸಂಗ್ರಹಿಸಿಟ್ಟ ಹಣವನ್ನು ಪತಿರಾಯ ಬೇರೆ ಹೆಂಗಸನ್ನು ಕರೆತಂದು ಚೆಕ್ಗೆ ಸಹಿ ಪಡೆದು ಡ್ರಾ ಮಾಡಿದ ವಿಚಿತ್ರ ಘಟನೆಯೊಂದು ಕೂಡಿಗೆಯಲ್ಲಿ ನಡೆದಿದೆ.
ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ನಿವಾಸಿ ಪದ್ಮಾ ಎಂಬವರ ಮನೆಯ ಗೋಡೆ ಬಿದ್ದಿದ್ದು, ರೂ. 25 ಸಾವಿರ ಪರಿಹಾರ ಪದ್ಮಾ ಅವರ ಬ್ಯಾಂಕ್ ಖಾತೆಗೆ ಸಂದಾಯವಾಗಿತ್ತು. ಪತಿ ವೆಂಕಟೇಶ್ ತನ್ನ ಹೆಂಡತಿಯ ಪಾಸ್ಬುಕ್ ತಂದು ಬ್ಯಾಂಕಿನಲ್ಲಿದ್ದ ಹಣವನ್ನು ಪಡೆಯಲು ಬೇರೆ ಹೆಂಗಸನ್ನು ತನ್ನ ಹೆಂಡತಿಯೆಂದು ಹೇಳಿ ಚೆಕ್ಗೆ ಸಹಿ ಹಾಕಿಸಿ ಬ್ಯಾಂಕಿನಿಂದ ರೂ. 10 ಸಾವಿರ ತೆಗೆದಿದ್ದಾರೆ.
ಇಂದು ಬ್ಯಾಂಕಿನಿಂದ ಪರಿಹಾರದ ಹಣವನ್ನು ತೆಗೆಯಲು ಬಂದ ಪದ್ಮಾ ಅವರಿಗೆ ನಕಲಿ ಹೆಂಡತಿಯನ್ನು ತೋರಿಸಿ ಹಣ ಪಡೆದಿರುವ ಮಾಹಿತಿ ಲಭಿಸಿದೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡುವದಾಗಿ ಪದ್ಮಾ ತಿಳಿಸಿದ್ದಾರೆ.
ಬ್ಯಾಂಕಿನ ವ್ಯವಸ್ಥಾಪಕರು ಕೂಡಾ ವೆಂಕಟೇಶ್ ಅವರ ವಿರುದ್ಧ ಪೋಲೀಸ್ ಠಾಣೆಗೆ ದೂರು ನೀಡುವದಾಗಿ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ