ಪೊನ್ನಂಪೇಟೆ, ಅ. 24: ಅತಿವೃಷ್ಟಿ ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಬೆಲೆಯ ಕೊರತೆಯಿಂದ ಬೇಸತ್ತಿರುವ ಕೃಷಿಕರು ಇದೀಗ ದಕ್ಷಿಣ ಕೊಡಗಿನಲ್ಲಿ ಹುಲಿ ಮತ್ತು ಕಾಡಾನೆಗಳ ಹಾವಳಿಯಿಂದ ತತ್ತರಿಸಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷವೇ ನೇರ ಕಾರಣ ಎಂದು ಆರೋಪಿಸಿರುವ ಬಾಳೆಲೆ ಕ್ಷೇತ್ರದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಶಾಶ್ವತವಾದ ವಿಶೇಷ ಯೋಜನೆಯನ್ನು ಜಾರಿಗೊಳಿಸಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕೊಡಗಿನ ಹಲವೆಡೆ ಪ್ರತಿದಿನ ವನ್ಯಜೀವಿಗಳ ಹಾವಳಿ ಹೆಚ್ಚುತ್ತಿದ್ದು, ಕೃಷಿಕರ ಬೆಳೆಗಳನ್ನು ನಾಶಪಡಿಸುತ್ತಿವೆ. ದಿನೇ ದಿನೇ ಹೆಚ್ಚುತ್ತಿರುವ ಹುಲಿ ಮತ್ತು ಕಾಡಾನೆಗಳ ಹಾವಳಿ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಅಲ್ಲದೆ ಇದು ಕೃಷಿಕರನ್ನು ತೀವ್ರವಾಗಿ ಬಾಧಿಸುತ್ತಿದೆ. ವನ್ಯಜೀವಿಗಳ ಹಾವಳಿಯಿಂದ ಈ ಭಾಗದ ಜನತೆಯ ದೈನಂದಿನ ಬದುಕಿಗೆ ತೊಡಕುಂಟಾ ಗುತ್ತಿದೆ. ಕೃಷಿಕರ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕೊಡಗಿನ ನಿಟ್ಟೂರು, ಕಾನೂರು, ನಾಲ್ಕೇರಿ, ಕೆ.ಬಾಡಗ, ಶ್ರೀಮಂಗಲ, ಬಾಳಲೆ ಮತ್ತು ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿ ಮತ್ತು ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ. ಈ ಭಾಗದಲ್ಲಿ ಹಿಂದೆ ನಿರಂತರವಾಗಿದ್ದ ಕಾಡಾನೆ ಹಾವಳಿಯೊಂದಿಗೆ ಇತ್ತೀಚಿನ ಕೆಲ ವರ್ಷಗಳಿಂದ ಹುಲಿ ಹಾವಳಿಯೂ ಸೇರಿಕೊಂಡು ಕೃಷಿಕರ ನೆಮ್ಮದಿ ಕೆಡಿಸಿದೆ. ಕಳೆದ ಐದು ವರ್ಷಗಳಿಂದ ವನ್ಯಜೀವಿಗಳ ಉಪಟಳ ಈ ಭಾಗದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದ್ದರೂ ಅರಣ್ಯ ಇಲಾಖೆ ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ಆರೋಪಿಸಿರುವ ಬಿ.ಎನ್. ಪ್ರಥ್ಯು ಅವರು, ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ವನ್ಯಜೀವಿಗಳ ಹಾವಳಿ ಮತ್ತು ಅದರಿಂದ ಜನರ ಬದುಕಿನ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಜಿಲ್ಲೆಯ ಅರಣ್ಯ ಅಧಿಕಾರಿಗಳು ಮೇಲಾಧಿಕಾರಿ ಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣ ಕೊಡಗಿನಲ್ಲಿ ಇದುವರೆಗೂ 45ಕ್ಕೂ ಹೆಚ್ಚು ಜಾನುವಾರುಗಳು ಹುಲಿಯ ದಾಳಿಗೆ ಬಲಿಯಾಗಿವೆ. ಈ ಪೈಕಿ ರೈತರ ಹಾಲು ಕೊಡುವ ಹತ್ತಾರು ಹಸುಗಳನ್ನು ಹುಲಿ ಕೊಂದು ಹಾಕಿದೆ. ಹುಲಿ ದಾಳಿಯಿಂದ ಸತ್ತ ಜಾನುವಾರುಗಳಿಗೆ ತಲಾ ರೂ 10,000 ಪರಿಹಾರ ನೀಡಿ ಅರಣ್ಯ ಇಲಾಖೆ ಕೈಕಟ್ಟಿ ಕುಳಿತುಕೊಳ್ಳುತ್ತದೆ. ಹಸುವೊಂದರ ಬೆಲೆ 30 ರಿಂದ 40 ಸಾವಿರ ರೂ ಗಳಿದ್ದರೂ ಅರಣ್ಯ ಇಲಾಖೆ ಕಡಿಮೆ ಮೊತ್ತದ ಪರಿಹಾರ ನೀಡಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪ ಮಾಡಿದ ಬಿ.ಎನ್. ಪ್ರಥ್ಯು ಅವರು, ವನ್ಯಜೀವಿ ಮತ್ತು ಮಾನವ ಸಂಘರ್ಷದ ಪರಿಹಾರಕ್ಕೆ ಜಿಲ್ಲೆಗೆ ಬರುವ ಯಾವದೇ ಅರಣ್ಯಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಇತ್ತೀಚಿಗೆ ನಾಗರಹೊಳೆಯಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಕೆಲ ಅರಣ್ಯಾಧಿಕಾರಿಗಳಿಗೆ ಹುಲಿ ಮತ್ತು ಕಾಡಾನೆಗಳ ಕುರಿತ ವೈಜ್ಞಾನಿಕ ಮಾಹಿತಿಗಳೇ ಇಲ್ಲ ಎಂದು ವಿವರಿಸಿದರು.
ವನ್ಯಜೀವಿ ಉಪಟಳಕ್ಕೆ ಅರಣ್ಯ ಇಲಾಖೆ ಶೀಘ್ರದಲ್ಲೇ ಶಾಶ್ವತ ಪರಿಹಾರದ ಮೂಲಕ ಕಡಿವಾಣ ಹಾಕದಿದ್ದಲ್ಲಿ ದಕ್ಷಿಣ ಕೊಡಗಿನ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರೈತರನ್ನು ಒಗ್ಗೂಡಿಸಿ ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.