ಸೋಮವಾರಪೇಟೆ, ಅ. 24: ರೈತ ಬೆಳೆದ ಬೆಳೆಗೆ ಬೆಲೆಯಿಲ್ಲದಂತಹ ಇಂದಿನ ದಿನಗಳಲ್ಲಿ ಉಪ ಬೆಳೆಯೊಂದಿಗೆ ಕಾಫಿ ಕೃಷಿಯನ್ನು ಅವಲಂಭಿಸುವದು ಉತ್ತಮ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಸಲಹೆ ನೀಡಿದರು.
ಇಲ್ಲಿನ ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ಸ್ಥಳೀಯ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವ್ಯವಸಾಯದ ಕುರಿತು ಜಾಗೃತಿ ಶಿಬಿರ ಮತ್ತು ಪೂರೈಕೆದಾರರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಲಾಸಿ ಜೀವನಕ್ಕೆ ಅವಶ್ಯವಿರುವ ಎಲ್ಲ ಉಪಕರಣಗಳು ಮತ್ತು ಅಗತ್ಯ ವಸ್ತುಗಳು ತೀವ್ರ ಪೈಪೋಟಿ ನಡುವೆ ಅಗ್ಗದ ಬೆಲೆಗೆ ದೊರಕುತ್ತದೆ. ಆದರೆ ರೈತರ ವ್ಯವಸಾಯಕ್ಕೆ ಅತ್ಯವಶ್ಯಕವಾದ ಕೃಷಿ ಯಂತ್ರೋಪಕರಣಗಳು ಕಡಿಮೆ ಬೆಲೆಗೆ ದೊರಕುವದಿಲ್ಲ. ಎಲ್ಲದಕ್ಕೂ ರೈತ ಏಕಾಂಗಿಯಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಿಸಿದರು.
ಇಂತಹ ಸಂದರ್ಭದಲ್ಲಿ ಸ್ವಸಹಾಯ ಸಂಘಗಳು ಅಥವಾ ರೈತ ಉತ್ಪಾದಕ, ಮತ್ತಿತರ ಸಹಕಾರ ಸಂಘಗಳನ್ನು ಅವಲಂಭಿಸಬೇಕಾಗಿದೆ. ಕಾಫಿ ಮಂಡಳಿಯಿಂದಲೂ ಬೆಳೆಗಾರರಿಗೆ ಕಣ, ಮರುನಾಟಿ, ಸ್ಪ್ರಿಂಕ್ಲರ್ಗೆ ಸಹಾಯಧನ ನೀಡಲಾಗು ವದು. ಇದನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಜಿಲ್ಲಾಧ್ಯಕ್ಷ ಎಂ.ಎಸ್. ಸುಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರ ಹಿತದೃಷ್ಟಿಯಿಂದ ಉತ್ಪಾದಕ ಸಂಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಸುಂಟಿಕೊಪ್ಪ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿಗಳ ರೈತರ ಅನುಕೂಲಕ್ಕಾಗಿ ಕೃಷಿಗೆ ಅಗತ್ಯವಿರುವ ಪರಿಕರಗಳು ಹಾಗೂ ಉಪಕರಣಗಳನ್ನು ಸಾಕಷ್ಟು ಕಡಿಮೆ ಬೆಲೆಯಲ್ಲಿ ರೈತರಿಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಮಡಿಕೇರಿ ತೋಟಗಾರಿಕಾ ಇಲಾಖೆಯ ವಿಸ್ತರಣಾ ಘಟಕದ ಸಹ ಪ್ರಾಧ್ಯಾಪಕಿ ವಿದ್ಯಾಶ್ರೀ, ರೈತ ಉತ್ಪಾದಕ ಸಂಸ್ಥೆಯ ಉಪಾಧ್ಯಕ್ಷ ರತೀಶ್, ವ್ಯವಸ್ಥಾಪಕ ನಿರ್ದೇಶಕ ಬನ್ನಳ್ಳಿ ಸತೀಶ್ ಇದ್ದರು.
ಇದೇ ಸಂದರ್ಭ ನಬಾರ್ಡ್ ಸಂಸ್ಥೆಯ ನಿವೃತ್ತ ಡಿ.ಜಿ.ಎಂ. ಎಂ.ಸಿ. ನಾಣಯ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಂಸ್ಥೆಗಳ ವಿಷಯ ತಜ್ಞರಾದ ವೇಣು ಗೋಪಾಲ್, ರವಿಕುಮಾರ್, ನಾಪಂಡ ಪೂಣಚ್ಚ, ದೇಸಾಯಿ, ಪೂರ್ಣೇಶ್ ವ್ಯವಸಾಯದ ಕುರಿತು ರೈತ ಬೆಳೆಗಾರರಿಗೆ ಅಗತ್ಯ ಮಾಹಿತಿಯನ್ನು ನೀಡಿದರು.