ಗೋಣಿಕೊಪ್ಪ, ಅ.24: ಆರ್.ಸಿ.ಇ.ಪಿ. ಒಪ್ಪಂದವನ್ನು ಪ್ರತಿರೋಧಿಸುವ ಮೂಲಕ ಭಾರತೀಯ ರೈತರನ್ನು ಉಳಿಸುವ ಪ್ರಯತ್ನದಲ್ಲಿ ಆರ್.ಸಿ.ಇ.ಪಿ. ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ರೈತರಿಂದ ಕೊಡಗು ಜಿಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ನಡೆದ ರೈತ ಚಳುವಳಿಯಲ್ಲಿ ಭಾರತ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಮೂಲಕ ದೇಶದ ಕೃಷಿಯನ್ನು ತೆರಿಗೆ ಮುಕ್ತ ವ್ಯಾಪಾರ ವಲಯಕ್ಕೆ ತೆರೆದಿಡಲು ಒಪ್ಪಂದ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಮುಂದುವರೆದ ದೇಶಗಳಲ್ಲಿ ಕೃಷಿಗೆ ಹೆಚ್ಚಿನ ಸಹಾಯ ಧನ ನೀಡುವದರಿಂದ ಯಾಂತ್ರಿಕ ಬೆಳೆ ಪದ್ದತಿ ಇರುವದರಿಂದ ಕಡಿಮೆ ಬೆಲೆಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಉತ್ಪನ್ನಗಳನ್ನು ತೆರಿಗೆ ಇಲ್ಲದೆ ಭಾರತಕ್ಕೆ ತಂದು ಸುರಿ ಮಾರುಕಟ್ಟೆ ಮಾಡುವದರಿಂದ ಇಲ್ಲಿನ ಕೃಷಿ ತೋಟಗಾರಿಕೆ, ಹೈನುಗಾರಿಕೆ ಇನ್ನೂ ನಷ್ಟವಾಗಿ ಉದ್ಯೋಗ ಕಡಿತವಾಗಲಿದೆ. ಇದರಿಂದ ರೈತರು ಸಂಕಷ್ಟಕ್ಕೆ ಬೀಳಲಿದ್ದಾರೆ. ಯಾವದೇ ಕಾರಣಕ್ಕೂ ಈ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. ದೇಶದಲ್ಲೆಡೆ ಏಕ ಕಾಲದಲ್ಲಿ ರೈತರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆಂದು ಜಿಲ್ಲಾಧ್ಯಕ್ಷ ಮನುಸೋಮಯ್ಯ ತಿಳಿಸಿದರು. ಪ್ರತಿಭಟನೆಯಲ್ಲಿ ರೈತರನ್ನು ಉದ್ದೇಶಿಸಿ ಹಿರಿಯ ರೈತ ಮುಖಂಡರಾದ ಹೇಮಚಂದ್ರ , ಸುಜಯ್ ಬೋಪಯ್ಯ, ಅಪ್ಪಚಂಗಡ ಮೋಟಯ್ಯ,ಚೆಕ್ಕೇರ ಕಾಳಯ್ಯ, ಮುಂತಾದವರು ಮಾತನಾಡಿದರು. ಮಡಿಕೇರಿಯ ಟೌನ್ ಹಾಲ್ ಮುಂಭಾಗ ಸಮಾಗಮಗೊಂಡ ರೈತ ಮುಖಂಡರು,ಕಾರ್ಯಕರ್ತರು ಘೋಷಣೆ ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ಸಾಗಿ ಬಂದರು.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್.ಸಿ.ಇ.ಪಿ.) ಮುಕ್ತ ವ್ಯಾಪಾರ ಒಪ್ಪಂದದ ವಿರುದ್ದ ಆಸಿಯಾನ್ ದೇಶಗಳು ಸೇರಿದಂತೆ ದೊಡ್ಡ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ,ಜಪಾನ್,ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‍ನಂತಹ ಇತರ 15 ದೇಶಗಳೊಂದಿಗೆ ಭಾರತ ಸರ್ಕಾರ ಆರ್.ಸಿ.ಇ.ಪಿ. ಮಾತುಕತೆ ನಡೆಸುತ್ತಿದೆ. ಆರ್.ಸಿ.ಇ.ಪಿ. ನಮ್ಮ ಆಹಾರ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ರೈತ ಮುಖಂಡರು ಹೇಳಿದರು.
11 ದೇಶಗಳೊಂದಿಗೆ, ಭಾರತವು ಈಗಾಗಲೇ ಗಮನಾರ್ಹವಾದ ವ್ಯಾಪಾರ ಕೊರತೆಯನ್ನು ಹೊಂದಿದೆ. ಮತ್ತು ಆರ್.ಸಿ.ಇ.ಪಿ. ಸಹಿ ಹಾಕುವ ಮೂಲಕ ಹೆಚ್ಚಾಗುತ್ತದೆ. ಭಾರತೀಯ ರೈತರನ್ನು ಮತ್ತೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲಾಗುವದನ್ನು ನಾವು ಒಪ್ಪುವದಿಲ್ಲ. ಅದು ಅವರ ಹಿತಾಶಕ್ತಿಗಳನ್ನು ರಕ್ಷಿಸುವದಿಲ್ಲ. ಬೇರೆಡೆ ಗಮನಾರ್ಹವಾದ ಸಬ್ಸಿಡಿಗಳ ವಿರುದ್ದ ಹೊಡೆತವನ್ನು ನೀಡುತ್ತದೆ. ಆರ್.ಸಿ.ಇ.ಪಿ.ಮುಕ್ತ ವ್ಯಾಪಾರ ಒಪ್ಪಂದ ಮುಂದುವರಿಯದಂತೆ ನಾವು ಒಟ್ಟಾಗಿ ವಿರೋಧಿಸಿದ್ದೇವೆ. ಹೈನುಗಾರಿಕೆ ಮತ್ತು ತೋಟಗಾರಿಕೆಯ ಉತ್ಪನ್ನಗಳನ್ನು ಕೃಷಿಯನ್ನು ಆರ್.ಸಿ.ಇ.ಪಿ.ಯಿಂದ ಹೊರತೆಗೆಯಲಾಗಿದೆ ಎನ್ನುವದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ತಕ್ಷಣವೇ ಆಯಾ ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಸಕ್ರಿಯಗೊಳಿಸಬೇಕು. ಮತ್ತು ಅವುಗಳನ್ನು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕ್ರಮ ವಹಿಸಬೇಕು. ಇಲ್ಲಿ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವದು ರೈತರು ಮಾತ್ರವಲ್ಲ ರಾಷ್ಟ್ರದ ಆಹಾರ ಸಾರ್ವಭೌಮತ್ವವೂ ಇಲ್ಲಿ ಅಪಾಯದಲ್ಲಿದೆ. ಕೃಷಿಯನ್ನು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳ ವ್ಯಾಪ್ತಿಯಿಂದ ದೂರವಿರಿಸುವ ಮೂಲಕ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು. ಖಂಡಿತವಾಗಿಯೂ ಆರ್.ಸಿ.ಇ.ಪಿ.ಯನ್ನು ತಡೆಯಬೇಕಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಕೊಡಗು ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ಇಟ್ಟೀರ ಸಬಿತ, ಪೊನ್ನಂಪೇಟೆ ಹೋಬಳಿ ಸಂಚಾಲಕ ಅಲೆಮಾಡ ಮಂಜುನಾಥ್, ಕೋದೆಂಗಡ ಬೆನ್ಜನ್, ಕಾಯಮಾಡ ಡಾಲಿ, ಹೆಚ್.ಎಸ್. ತಮ್ಮಯ್ಯ, ಪೆಮ್ಮಂಡ ಉಮೇಶ್, ಕೋದೇಂಗಡ ಸುರೇಶ್, ಎಂ.ಬಿ.ಅಶೋಕ್, ಎನ್.ಆರ್.ಪ್ರಕಾಶ್, ಕೋಪಟ್ಟೀರ ಗಣಪತಿ, ಮಲ್ಲೆಂಗಡ ಸುಬ್ರಮಣಿ, ಶ್ರೀಮಂಗಲ ಹೋಬಳಿ ಸಂಚಾಲಕ ಬಾಚಮಾಡ ಭವಿ ಕುಮಾರ್, ಟಿ.ಶೆಟ್ಟಿಗೇರಿ ಸಂಚಾಲಕ ಕಂಭ ಕಾರ್ಯಪ್ಪ, ಹುದಿಕೇರಿಯ ಸಂಚಾಲಕ ಸೂರಜ್, ರೈತ ಮುಖಂಡರುಗಳಾದ ಮಲ್ಚೀರ ಅಶೋಕ್, ತೀತರಮಾಡ ರಾಜ, ಸುನೀಲ್, ಪುಚ್ಚಿಮಾಡ ಅಶೋಕ್,s ಸುನೀಲ್, ಸಿದ್ದಾಪುರ ಹೋಬಳಿ ಸಂಚಾಲಕ ಬುಟ್ಟಿಯಂಡ ಹರಿ ಸೋಮಯ್ಯ, ಮಂಡೇಪಂಡ ಅರ್ಜುನ್, ಅಜ್ಜಮಾಡ ಸಿದ್ದು ಅಯ್ಯಣ್ಣ, ಬೊಟ್ಟಂಗಡ ಮಹೇಶ್, ನೂರೆರ ಉತ್ತಯ್ಯ, ತಡಿಯಂಗಡ ಸೋಮಣ್ಣ, ಪುಗ್ಗೆರ ಶಿವ, ಕೈಬುಲಿರ ಸುನೀಲ್, ಲಾಲಾ, ಬಾಚರಣಿಯಂಡ ರಾಜೇಶ್, ನೂರೇರ ಮಿಥುನ್, ಗಿರಿಶ್, ಅನಿಲ್, ಉತ್ತಯ್ಯ, ಕಾಲೂರಿನ ಜಯಂತಿ, ಸುಭಾಷ್, ನಿತಿನ್ ಮಚ್ಚಮಾಡ ನಾಣಯ್ಯ, ಬೋಡಂಗಡ ಅಶೋಕ್, ಪ್ಯಾನ್ಸಿ ಮುಂತಾದವರು ಭಾಗವಹಿಸಿದ್ದರು.