ಸಿದ್ದಾಪುರ, ಅ. 23: ಸಿದ್ದಾಪುರ ಮೈಸೂರು ರಾಜ್ಯ ಹೆದ್ದಾರಿಯ ಬದಿಯಲ್ಲೇ ಕಳೆದ ಕೆಲವು ತಿಂಗಳುಗಳಿಂದ ರಾಶಿ ಗಟ್ಟಲೆ ತ್ಯಾಜ್ಯವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ವಿಲೇವಾರಿ ಮಾಡುತ್ತಿರುವದರಿಂದ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಾಗಿದೆ.
ತ್ಯಾಜ್ಯವನ್ನು ಸುರಿದಿರುವ ಪಕ್ಕದಲ್ಲೇ ನೂರಾರು ಮನೆಗಳಿವೆ. ತ್ಯಾಜ್ಯದ ಸಮೀಪದಲ್ಲೇ ಬೆಳಿಗ್ಗೆ ಮತ್ತು ಸಂಜೆ ಶಾಲಾ ವಿದ್ಯಾರ್ಥಿಗಳ ಓಡಾಡುತ್ತಾರೆ. ಅಲ್ಲದೆ ತ್ಯಾಜ್ಯಗಳ ಸುತ್ತಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳೆತ ತ್ಯಾಜ್ಯದಿಂದಾಗಿ ಹುಳಗಳು ಹಾಗೂ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ.
ಇದರ ಬಗ್ಗೆ ಗ್ರಾಮ ಪಂಚಾಯಿತಿಗೆ ಸ್ಥಳೀಯ ನಿವಾಸಿಗಳು ಹಲವು ಬಾರಿ ಮನವಿ ಮಾಡಿದರೂ ಯಾವದೇ ಪ್ರಾಯೋಜನವಾಗಿಲ್ಲ.
ಸಿದ್ದಾಪುರ ಗ್ರಾಮ ಪಂಚಾಯಿತಿಯು ಜಿಲ್ಲೆಯಲ್ಲೇ ಅತ್ಯಧಿಕ ಆದಾಯ ಹಾಗೂ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಂಚಾಯಿತಿಯಾಗಿದೆ. ಆದರೆ, ಕಳೆದ ಹಲವು ದಶಕಗಳ ಸಮಸ್ಯೆಯಾದ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆಡಳಿತ ಮಂಡಳಿ ಮುಂದಾಗದೆ ಕಾಲ ಹರಣ ಮಾಡುತ್ತಿದೆ ಎಂಬ ಆರೋಪ ಇದೆ. ಇದರ ಬಗ್ಗೆ ವಿರೋಧ ಪಕ್ಷದಲ್ಲಿರುವವರೂ ಮೌನವಾಗಿದ್ದಾರೆ. ಅಲ್ಲದೆ ಸ್ಥಳೀಯ ಜಿ.ಪಂ. ಹಾಗೂ ತಾ.ಪಂ. ಸದಸ್ಯರು ಕೂಡ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬದು ಗ್ರಾಮಸ್ಥರ ಆರೋಪವಾಗಿದ್ದು, ಮುಖ್ಯ ರಸ್ತೆಯ ಬದಿಯಲ್ಲಿ ಸುರಿದಿರುವ ಕೊಳೆತ ತ್ಯಾಜ್ಯಗಳನ್ನು ಕೂಡಲೇ ವಿಲೇವಾರಿ ಮಾಡದಿದ್ದಲ್ಲಿ ಗ್ರಾಮ ಪಂಚಾಯತಿ ಬೀಗ ಜಡಿದು ಪ್ರತಿಭಟಿಸುವದಾಗಿ ಎಚ್ಚರಿಸಿದ್ದಾರೆ.