ಸೋಮವಾರಪೇಟೆ, ಅ. 23: ರೈತರು ತಮ್ಮ ಸ್ವಂತ ಕೊಳವೆ ಬಾವಿಗಳಿಂದ ಕುಡಿಯುವ ನೀರು ಬಳಸುತ್ತಿರುವದಕ್ಕೆ ಸೆಸ್ಕ್ ಇಲಾಖೆ ತೊಂದರೆ ನೀಡುತ್ತಿದ್ದು, ಕೂಡಲೇ ಕಿರುಕುಳ ನೀಡುವದನ್ನು ನಿಲ್ಲಿಸದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ರೈತರ ಬೋರ್ವೆಲ್ ಮಾಲೀಕರ ಸಂಘ ಹಾಗೂ ಜಿಲ್ಲಾ ರೈತ ಹೋರಾಟ ಸಮಿತಿ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ, ಗಣಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ರೈತರಿಗೆ ಕುಡಿಯುವ ನೀರಿಗೆ ಇಲಾಖಾಧಿಕಾರಿಗಳು ನಿರಂತರ ತೊಂದರೆ ನೀಡುತ್ತಿದ್ದಾರೆ. ಕೃಷಿಗೆ ಬಳಸುವ ನೀರನ್ನು ಕುಡಿಯಲು ಬಳಸಬಾರದು ಎಂದು ದಂಡ ವಿಧಿಸುತ್ತಿದ್ದಾರೆ. ತಪ್ಪಿದಲ್ಲಿ ತಕ್ಷಣದಿಂದಲೇ ವಿದ್ಯುತ್ ಕಡಿತಗೊಳಿಸುವದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ರೀತಿ ಐಗೂರು ಸೇರಿದಂತೆ ತಾಲೂಕಿನ ಇನ್ನಿತರ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಂಪರ್ಕವನ್ನು ವಿಚಕ್ಷಣ ದಳದ ಅಧಿಕಾರಿಗಳು ಕಡಿತಗೊಳಿಸುತ್ತಿದ್ದಾರೆ ಎಂದರು. ಇತ್ತೀಚೆಗೆ ಜಿಲ್ಲೆಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಭೇಟಿ ನೀಡಿದ ಸಂದರ್ಭ, 10 ಹೆಚ್.ಪಿ.ವರೆಗಿನ ಬೋರ್ ವೆಲ್‍ಗಳಿಗೆ ಸರ್ಕಾರ ಉಚಿತ ವಿದ್ಯುತ್ ಸರಬರಾಜು ಮಾಡುವಂತೆ ಸೂಚಿಸಿದ್ದಾರೆ. ರೈತರಿಗೆ ತೊಂದರೆ ನೀಡಬೇಡಿ ಎಂದು ಮೌಖಿಕವಾಗಿ ಆದೇಶ ನೀಡಿದ್ದಾರೆ. ಆದರೆ, ಇಲಾಖಾಧಿಕಾರಿಗಳನ್ನು ಇದರತ್ತ ಗಮನಸೆಳೆದರೆ, ನಮಗೆ ಸರ್ಕಾರದಿಂದ ಯಾವದೇ ಆದೇಶ ಬಂದಿಲ್ಲ ಎಂದು ಹೇಳುತ್ತಿದಾರೆ ಎಂದು ದೂರಿದರು.

ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿ ಅಧ್ಯಕ್ಷ ಲಿಂಗೇರಿ ರಾಜೇಶ್, ಪದಾಧಿಕಾರಿಗಳಾದ ಜಯಪ್ರಕಾಶ್, ಬಾಣಾವರದ ಜಿ.ಎನ್. ರೇವಣ್ಣ ಮತ್ತು ಸಣ್ಣಸ್ವಾಮಿ ಉಪಸ್ಥಿತರಿದ್ದರು.