ಮಡಿಕೇರಿ, ಅ. 22: ಮಡಿಕೇರಿಯ ಕೋಟೆಯಲ್ಲಿರುವ ಅರಮನೆ ಆವರಣದ ಲೋಕೋಪಯೋಗಿ ಇಲಾಖೆ ಕಚೇರಿಯನ್ನು; ಇದೇ ತಾ 31ಕ್ಕೆ ತೆರವುಗೊಳಿಸಲೇಬೇಕಿದೆ. ಈ ದಿಸೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು; ನಗರದ ಕಾನ್ವೆಂಟ್ ಬಳಿಯ ತಮ್ಮ ಸ್ವಂತ ನಿವೇಶನದಲ್ಲಿ ನೂತನ ಕಚೇರಿಯನ್ನು ನಿರ್ಮಿಸಲು ಮುಂದಾಗಿದೆ. ಅಲ್ಲದೆ ಇಲ್ಲಿ ಕೆಲಸ ಆರಂಭಿಸಿ ವರ್ಷ ಕಳೆದರೂ ಕಟ್ಟಡ ಪೂರ್ಣಗೊಂಡಿಲ್ಲ.ಬದಲಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯು ಇಲ್ಲಿನ ಇಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರಿಗೆ ಸವಾಲಾಗಿ ಪರಿಣಮಿಸಿದೆ. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಭಿಯಂತರರು (ಇಂಜಿನಿಯರ್‍ಗಳು) ಇತರ ಇಲಾಖೆಗಳ ಕೆಲಸಗಳಿಗೆ ಬೇರೆ ಬೇರೆ ಕಾರಣದಿಂದ ಕಾಮಗಾರಿ ವಿಳಂಬ ಮಾಡುವ ಟೀಕೆ ಎದುರಿಸುತ್ತಿದ್ದಾರೆ.

ಈ ನಡುವೆ ಅನಿವಾರ್ಯವಾಗಿ ತಮ್ಮದೇ ಇಲಾಖೆಯ ಕಚೇರಿ ಕಟ್ಟಡ ಕಾಮಗಾರಿ ತುರ್ತಾಗಿ ಪೂರೈಸುವ ಮೂಲಕ, (ಮೊದಲ ಪುಟದಿಂದ) ಕೋಟೆ ಆವರಣದಿಂದ ನೂತನ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವ ಆಶಯವಿದ್ದರೂ, ಕಾಮಗಾರಿ ಮುಂದೆ ಸಾಗುತ್ತಿಲ್ಲ; ಇದಕ್ಕೆ ಕಾರಣ ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯೆಂದು ತಿಳಿದು ಬಂದಿದೆ.ಹೀಗಾಗಿ ಸ್ವತಃ ಜಿಲ್ಲಾ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ ಅವರು ತಲೆಕೆಡಿಸಿಕೊಂಡಿದ್ದಾರೆ. ರಾಜ್ಯ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಇದೇ ತಾ. 31ಕ್ಕೆ ಅರಮನೆಯೊಳಗಿನ ಕಚೇರಿಯನ್ನು ಬಿಟ್ಟುಕೊಡಬೇಕಿದೆ. ಆದರೆ, ತಮ್ಮ ಇಲಾಖೆಯ ನಿವೇಶನದಲ್ಲಿ ರೂ. 4.51 ಕೋಟಿ ವೆಚ್ಚದಲ್ಲಿ ನೂತನ ಲೋಕೋಪಯೋಗಿ ಇಲಾಖೆ ಕಚೇರಿಯ ಕಟ್ಟಡವು ನಿರ್ಮಾಣದೊಂದಿಗೆ, ಶೇ. 80 ರಷ್ಟು ಕೆಲಸ ಪೂರೈಸಿದ್ದರೂ; ಅದು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಕಾರಣ ಈ ಕಟ್ಟಡದ ನಿವೇಶನಕ್ಕೆ ಸಾಮಗ್ರಿಗಳನ್ನು ಪೂರೈಸಲು ಸಾಧ್ಯವಾಗದೆ; ಮಳೆಯಿಂದಾಗಿ ಗೊಸರುಮಯದೊಂದಿಗೆ ಲಾರಿಯ ಚಕ್ರಗಳು ಹೂತುಹೋಗುವಂತಾಗಿದೆ. ಹೀಗಾಗಿ ಸರಕುಗಳನ್ನು ನಿವೇಶನದೊಳಗೆ ಕೊಂಡೊಯ್ಯಲಾಗದೆ ಕೆಲಸ ವಿಳಂಬವಾಗುತ್ತಿದೆ ಎಂದು ಬೆಂಗಳೂರಿನ ಸ್ಟಾರ್ ಬಿಲ್ಡರ್ಸ್ ಮುಖ್ಯಸ್ಥ ಪೆರುಮಾಳ್ ಅಸಹಾಯತೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಈಗಿನ ಮಳೆಯಿಂದಾಗಿ ಕೆಲಸ ವಿಳಂಬವಾಗುತ್ತಿದ್ದು, ಮಳೆ ಬಿಡುವು ನೀಡಿದರೆ, ನವೆಂಬರ್ ಅಂತ್ಯಕ್ಕೆ ಕಟ್ಟಡಕ್ಕೆ ಸಂಪರ್ಕ ರಸ್ತೆಯೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವದಲ್ಲದೆ, ಆವರಣಗೋಡೆ ನಿರ್ಮಿಸಿಕೊಡಲಾಗುವದು ಎಂದು ತಿಳಿಸಿದ್ದಾರೆ.

ಹೀಗಾಗಿ ಕೇವಲ ಒಂದೆರಡು ತಿಂಗಳು ಕೋಟೆಯಲ್ಲಿರುವ ಕಚೇರಿಯನ್ನು ಯಾವದಾದರೂ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಇಂಜಿನಿಯರ್ ಇಬ್ರಾಹಿಂ ಬೇಸರದ ನುಡಿಯಾಡಿದ್ದಾರೆ.

ನಿರೀಕ್ಷಣಾ ಮಂದಿರಕ್ಕೆ

ಪ್ರಸಕ್ತ ಪರಿಸ್ಥಿತಿಯಲ್ಲಿ ಅನಿವಾರ್ಯವಾದರೆ ತಾ. 31ರ ಬಳಿಕ ಮಂಗಳೂರು ರಸ್ತೆಯ ನಿರೀಕ್ಷಣಾ ಮಂದಿರಕ್ಕೆ ಲೋಕೋಪಯೋಗಿ ಕಚೇರಿ ಸ್ಥಳಾಂತರಿಸಲಾಗುವದು ಎಂದು ಸಂಬಂಧಿಸಿದ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.