*ಗೋಣಿಕೊಪ್ಪಲು, ಅ. 21: ಕೊಡವ ಸಿನಿಮಾಗಳಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗ ದಿದ್ದರೂ ಕೊಡವ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಕೊಡವ ಸಿನಿಮಾಗಳನ್ನು ಮಾಡಲಾಗುತ್ತಿದೆ. ಹೀಗೆ ಅಭಿಮಾನ ಪೂರಕವಾಗಿ ತಯಾರಿಗೊಂಡ ಸಿನಿಮಾಗಳನ್ನು ನೋಡುವ ಮೂಲಕ ಹೆಚ್ಚಿನ ಪೆÇ್ರೀತ್ಸಾಹ ನೀಡಬೇಕೆಂದು ಅಥ್ಲೆಟಿಕ್ ಹಾಗೂ ಕೊಡಗ್ರ ಸಿಪಾಯಿ ಸಿನಿಮಾದ ನಾಯಕ ನಟ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿರುನಾಣಿ ಪುತ್ತುಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೊಡಗ್ರ ಸಿಪಾಯಿ ಕೊಡವ ಸಿನಿಮಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಡಗಿನಲ್ಲಿ ಪ್ರಾದೇಶಿಕ ಸಿನಿಮಾವೊಂದು ತೆರೆಕಂಡರೆ ಬಿಡುಗಡೆಗೊಳಿಸಲು ಚಿತ್ರಮಂದಿರಗಳ ಕೊರತೆ ಕಾಡುತ್ತಿದೆ. ಕೊಡಗಿನಲ್ಲಿ ಉತ್ತಮ ಚಿತ್ರಮಂದಿರಗಳು ಕಾರ್ಯನಿರ್ವಹಿಸಿದರೆ ಮತ್ತಷ್ಟು ಕೊಡವ ಸಿನಿಮಾಗಳನ್ನು ತೆರೆಗೆ ತರಬಹುದು ಎಂದು ತಿಳಿಸಿದರು.
ಪುತ್ತು ಭಗವತಿ ದೇವಸ್ಥಾನದ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ಸಿನಿಮಾ ಪ್ರದರ್ಶನ ಆಯೋಜಕರಾದ ಕುಪ್ಪಣಮಾಡ ಪೂಣಚ್ಚ, ಭರತ್ ಹಾಗೂ ಮುಖ್ಯ ಅತಿಥಿಗಳಾಗಿ ಜಿಲ್ಲಾ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕಾಫಿ ಮಂಡಳಿ ನಿರ್ದೇಶಕ ಬೊಟ್ಟಂಗಡ ರಾಜು, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ, ಸಿನಿಮಾ ನಟ ವಾಂಚಿರ ವಿಠಲ್ ನಾಣಯ್ಯ, ಸಿನಿಮಾ ಕಥೆಗಾರ್ತಿ ಉಳುವಂಗಡ ಕಾವೇರಿ ಉದಯ, ಕೊಡಗ್ರ ಸಿಪಾಯಿ ಸಿನಿಮಾದ ನಟಿಯರಾದ ಕುಪ್ಪಣಮಾಡ ಜಾನ್ಸಿ, ಕುಪ್ಪಣಮಾಡ ದಿವ್ಯ, ಸಿನಿಮಾ ವಿತರಕ ಬಾಳೇರ ಪ್ರತಿಕ್ಷ್ ಪೂವಯ್ಯ, ಉತ್ತಪ್ಪ ಉಪಸ್ಥಿತರಿದ್ದರು.