ಕೂಡಿಗೆ, ಅ. 20 : ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಗದ್ದೆಗಳಲ್ಲಿ ಭತ್ತದ ಬೆಳೆಗೆ ರೋಗ ಹರಡಿದ್ದು, ಭತ್ತದ ಬೆಳೆಯನ್ನು ಹುಳುಗಳು ಆವರಿಸಿಕೊಂಡಿದೆ. ದಿನಂಪ್ರತಿ ಮಳೆ ಬೀಳುತ್ತಿದ್ದರೂ ಹಾಗೂ ಯಾವದೇ ಔಷಧಿಗಳನ್ನು ಸಿಂಪಡಿಸಿದರೂ ರೋಗ ಕಡಿಮೆಯಾಗುತ್ತಿಲ್ಲ. ಒಂದು ಗದ್ದೆಗೆ ಹರಡಿದ್ದ ರೋಗ ಒಂದು ಎಕರೆ ಪ್ರದೇಶದ ಭತ್ತದ ಬೆಳೆಗಳಿಗೆ ಹರಡಿ, ಭತ್ತದ ಬೆಳೆಯು ತೆನೆ ಕಟ್ಟಲು ಸಾಧ್ಯವಾಗದೆ ಒಣಗುತ್ತಿದೆ.
ಈಗಾಗಲೇ ಈ ವ್ಯಾಪ್ತಿಯ ರೈತರಿಂದ ಕೃಷಿ ಇಲಾಖೆಯಿಂದ ಪರಿಸ್ಕøತವಾದ ಭತ್ತವನ್ನು ಸಹಕಾರ ಸಂಘಗಳ ಮೂಲಕ ಭತ್ತದ ಬಿತ್ತನೆ ಬೀಜ ಖರೀದಿಸಿ, ಬಿತ್ತನೆ ಮಾಡಿ, ಸಸಿ ಮಡಿಗಳನ್ನು ನಾಟಿ ಮಾಡಲಾಗುತ್ತಿದೆ. ಆದರೆ, ಇದೀಗ ನಾಟಿ ಮಾಡಿ ಎರಡೂವರೆ ಇಂದ ಮೂರು ತಿಂಗಳು ಕಳೆದಿದ್ದರೂ, ಭತ್ತವು ಗರ್ಭ ಕಟ್ಟಿ ತೆನೆ ಕಟ್ಟುವ ಸಂದರ್ಭವಾಗಿದ್ದರು ಹುಳುಗಳ ಕಾಟದಿಂದಾಗಿ ಗದ್ದೆಗಳಲ್ಲಿ ಭತ್ತದ ಬೆಳೆಯು ಒಣಗಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ.
ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಗಳಲ್ಲಿ ಭತ್ತದ ಬೆಳೆಗೆ ಹುಳುಗಳ ಕಾಟ ಒಂದೆಡೆಯಾದರೆ, ದಿನಂಪ್ರತಿ ಸುರಿಯುವ ಅಕಾಲಿಕ ಮಳೆಯಿಂದಾಗಿ ಭತ್ತವು ತೆನೆ ಕಟ್ಟುವ ಸಂದರ್ಭದಲ್ಲಿ ನೀರು ತುಂಬಿಕೊಂಡು ಜಳ್ಳು ಬೀಳುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಬೆಳೆ ಹಾಳಾಗಿರುವ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಔಷಧೊಪಚಾರಕ್ಕೆ ಸಹಕರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.