ಸಿದ್ದಾಪುರ, ಅ. 19: ರಾಜ್ಯ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ನೆಲ್ಯಹುದಿಕೇರಿ ಸರಕಾರಿ ಶಾಲೆಯ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಇದೇ ಸಂದರ್ಭ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆಲವು ರೈತರುಗಳು ಸಚಿವರ ಬಳಿ ಮಾತನಾಡಿ, ಜಿಲ್ಲೆಯ ಕೃಷಿಕರು ಬಳಸುತ್ತಿರುವ ಪಂಪ್ಸೆಟ್ಗಳಿಗೆ ಅಳವಡಿಸಿದ ವಿದ್ಯುಚ್ಛಕ್ತಿಗೆ ಅಧಿಕ ಮೊತ್ತದ ಬಿಲ್ ಬರುತ್ತಿದೆ ಎಂದು ಗಮನ ಸೆಳೆದರು. ಅಧಿಕ ಬಿಲ್ ಬರುತ್ತಿರುವ ಹಿನ್ನೆಲೆಯಲ್ಲಿ ಕೆಲವು ರೈತರು ಹಣ ಪಾವತಿಸಲು ಸಾಧ್ಯವಾಗ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಪಾವತಿಸದ ರೈತರ ಪಂಪ್ಸೆಟ್ ವಿದ್ಯುತ್ ಅನ್ನು ಕಡಿತಗೊಳಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಈ ವೇಳೆ ಸಚಿವ ಸೋಮಣ್ಣ ಅವರು ಮೈಸೂರಿನ ವಿದ್ಯುಚ್ಛಕ್ತಿ ನಿಗಮದ ಮುಖ್ಯ ಅಭಿಯಂತರರಿಗೆ ದೂರವಾಣಿ ಕರೆ ಮಾಡಿ ರೈತರ ಪಂಪ್ಸೆಟ್ನ ದರವನ್ನು ಪರಿಶೀಲಿಸಿ ಕಡಿಮೆಗೊಳಿಸುವಂತೆ ಹಾಗೂ ವಿದ್ಯುತ್ ಕಡಿತಗೊಳಿಸದಂತೆ ಸೂಚನೆ ನೀಡಿದರು. ಈ ಸಂದರ್ಭ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ, ಸಿ.ಇ.ಓ., ಉಪವಿಭಾಗಾಧಿಕಾರಿ ಇನ್ನಿತರರು ಹಾಜರಿದ್ದರು.