ಚೆಟ್ಟಳ್ಳಿ, ಅ. 19: ಕಾವೇರಿ ತೀರ್ಥೋದ್ಭವದಂದು ಕೊಡವ ಮಕ್ಕಡ ಕೂಟ, ಕೊಡವಾಮೆ, ಕೊಡವಬೈಕ್ ರೈಡರ್ಸ್, ಬೆಂಗಳೂರು ಕೊಡವ ಸಮಾಜ ಯೂತ್ ಕೌನ್ಸಿಲ್, ಕೊಡಗು ಫಾರ್ ಟುಮಾರೊ, ಕನೆಟ್ಟಿಂಗ್ ಕೊಡವಾಸ್, ಸೇವ್ ಕಾವೇರಿ, ಕಾವೇರಿ ಕಾಲೇಜಿನ ಕೊಡವ ಯುವಕ ಹಾಗೂ ಯುವತಿಯರು ಹೀಗೆ ಹಲವು ಕೊಡವ ವಿವಿಧ ಸಂಘಟನೆಯ 70 ಸದಸ್ಯರು ಕೊಡವ ಸಂಪ್ರದಾಯದ ಕಪ್ಪು ಹಾಗೂ ಬಿಳಿ ಕುಪ್ಯಚೇಲೆ ತಲೆಗೆ ವಸ್ತ್ರದ ಉಡುಗೆಯೊಂದಿಗೆ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿ ಪಾದಾಯಾತ್ರೆಯಲ್ಲಿ ತಲಕಾವೇರಿಗೆ ತೆರಳಿದರು.

ರಾತ್ರಿ ಸುಮಾರು 7 ಗಂಟೆಗೆ ಸಂಪ್ರದಾಯದ ದುಡಿಕೊಟ್ಟ್ ಹಾಡಿನೊಂದಿಗೆ ತಲಕಾವೇರಿಯ ಸನ್ನಿಧಿಗೆ ಪಾದಯಾತ್ರೆ ತೆರಳಿ ರಾತ್ರಿ 10.30ಕ್ಕೆ ಸನ್ನಿಧಿಗೆ ತಲಪಿದರು. ನಂತರದಲ್ಲಿ ಹಲವು ವರ್ಷಗಳಿಂದ ತ¯ಕಾವೇರಿ ತೀರ್ಥೋದ್ಭವದಂದು ದುಡಿಕೊಟ್ಟ್ ಹಾಡಿನೊಂದಿಗೆ ದೇವರಹಾಡನ್ನು ಹಾಡುತಿದ್ದ ಮುದ್ದಂಡ ದೇವಿ ದೇವಯ್ಯ ಅವರ ಮುಂದಾಳತ್ವದ ಕರವಲೆ ಭಗವತಿ ದೇವಾಲಯದ ದುಡಿಕೊಟ್ಟ್ ತಂಡ ಮುಖ್ಯ ದ್ವಾರದಿಂದ ದುಡಿಕೊಟ್ಟ್ ಹಾಡಿನೊಂದಿಗೆ ತೆರಳಿ ತೀರ್ಥೋದ್ಭವದ ಸಮಯದವರೆಗೆ ಕಾವೇರಿ ಪುರಾಣದ ಹಾಡನ್ನು ಹಾಡಿದರು.

ತಿರಿಬೊಳ್ಚ ಕೊಡವ ಸÀಂಘಟನೆ ತಳಿಯತಕ್ಕಿ ದೀಪವನ್ನಿಡಿದು ಕಾವೇರಿ ಕೀರ್ತನೆಯನ್ನು ಹಾಡಿದರು. ಕೊಡವ ಮಕ್ಕಡ ಕೂಟವು ಕಳೆದ 8 ವರ್ಷದಿಂದ ಕಾವೇರಿ ತೀರ್ಥೋದ್ಭವ ದಿನದಂದು ಕಾವೇರಿ ಚಂಗ್ರಾಂದಿ ಯಾತ್ರೆ ನಡೆಸುತ್ತಾ ಬರುತಿದ್ದು, ಇದರೊಂದಿಗೆ ಈ ಬಾರಿ ಕಳೆದೆರಡು ವರ್ಷಗಳಿಂದ ವಿವಿಧ ಕೊಡವ ಸಂಘಟನೆಗಳು ಸೇರಿ ಭಾಗಮಂಡಲ ಭಗಂಡೇಶ್ವರ ಸನ್ನಿಧಿಯಿಂದ ಪಾದಯಾತ್ರೆ ನಡೆಸಿದರು.

-ಕರುಣ್‍ಕಾಳಯ್ಯ