ಸುಭಾಶ್ ಚಂದ್ರ ಅಭಿಮತ
ಸೋಮವಾರಪೇಟೆ, ಅ. 19: ಭಾರತದ ಸನಾತನ ಸಂಸ್ಕೃತಿಯ ಉಳಿವು ಮತ್ತು ಜಾಗೃತಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಉದಯವಾಗಿದ್ದು, ದೇಶದ ಪರಮ ವೈಭವ ಸ್ಥಿತಿಯ ಸಾಕಾರಕ್ಕೆ ಹಿಂದೂ ಸಮಾಜ ಒಟ್ಟಾಗಬೇಕಿದೆ ಎಂದು ಆರ್ಎಸ್ಎಸ್ ಪುತ್ತೂರು ಜಿಲ್ಲಾ ಕಾರ್ಯವಾಹ ಸುಭಾಶ್ ಚಂದ್ರ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಸಮೀಪದ ಗೌಡಳ್ಳಿ ಬಿಜಿಎಸ್ ಶಾಲಾ ಆವರಣದಲ್ಲಿ, ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೂ ಸಮಾಜದ ಸಂಘಟನೆಗಾಗಿ ಡಾಕ್ಟರ್ ಕೇಶವ ಬಲಿರಾಂ ಹೆಗಡೇವಾರ್ ಅವರು 1925ರಲ್ಲಿ ಸಂಘವನ್ನು ಸ್ಥಾಪಿಸಿದ್ದು, ಇಂದು ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಇಡೀ ಸಮಾಜ ಇಂದು ಸಂಘ ಕಾರ್ಯದಲ್ಲಿ ಕೈಜೋಡಿಸುತ್ತಿದೆ ಎಂದರು. ವನವಾಸಿ ಕಲ್ಯಾಣ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಮಜ್ದೂರ್ ಸಂಘ ಸೇರಿದಂತೆ ಇತರ ಕ್ಷೇತ್ರಗಳಲ್ಲೂ ಸಂಘವು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ. ಇಂದು ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಸಜ್ಜನ ವ್ಯಕ್ತಿಗಳು ಸಮಾಜದ ಜಾಗೃತಿ ಕಾರ್ಯದಲ್ಲಿ ಧುಮುಕಬೇಕು. ರಾಮ ರಾಜ್ಯ ನಿರ್ಮಾಣವಾಗಬೇಕು.ಅಂತಹ ಕಾರ್ಯದಲ್ಲಿ ಸಂಘವು ತೊಡಗಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ ಮಣಗಲಿ ಚಿಣ್ಣಪ್ಪ ಮಾತನಾಡಿ, ಕಾಶ್ಮೀರದ 370 ನೇ ವಿಧಿ ರದ್ದತಿಯಿಂದ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದರು. ಪ್ರತಿಯೋರ್ವರು ಪರಿಸರ ರಕ್ಷಣೆಗೆ ಕಟಿಬದ್ಧರಾಗಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ಬಿಡಬೇಕು ಎಂದು ಮನವಿ ಮಾಡಿದರು.
ಶಿಬಿರ ಕಾರ್ಯವಾಹ ಕುಟ್ಟಂಡ ಮಿರನ್ ಮಾತನಾಡಿ, ಕಳೆದ 1 ವಾರಗಳಿಂದ ನಡೆದ ಪ್ರಾಥಮಿಕ ಶಿಕ್ಷಾ ವರ್ಗದಲ್ಲಿ ಜಿಲ್ಲೆಯ ಕುಟ್ಟ, ಕರಿಕೆ ಸೇರಿದಂತೆ ಕೊಡ್ಲಿಪೇಟೆ ಭಾಗದಿಂದ ಒಟ್ಟು 59 ಉದ್ಯೋಗಿಗಳು, 105 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 164 ಶಿಕ್ಷಾರ್ಥಿಗಳು ಭಾಗವಹಿಸಿದ್ದು, ಗೌಡಳ್ಳಿ ಸುತ್ತಮುತ್ತಲ ಗ್ರಾಮಗಳ 57 ಮನೆಗಳಿಂದ ಮಾತೃಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ವಿವಿಧ ಶಾರೀರಿಕ ಪ್ರದರ್ಶನ, ದಂಡ, ಯೋಗಾಸನ, ಕರಾಟೆ, ಆಟಗಳ ಪ್ರದರ್ಶನ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಸ್ವಯಂಸೇವಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.