ಕೂಡಿಗೆ, ಅ. 20 : ಸೋಮವಾರಪೇಟೆಗೆ ಹತ್ತಿರದ ರಸ್ತೆಯಾಗಿರುವ ಹಾಸನ ಹೆದ್ದಾರಿಗೆ ಹೊಂದಿಕೊಂಡಂತಿರುವ ಕಣಿವೆ-ಸೀಗೆಹೊಸೂರು ಮತ್ತು ಯಲಕನೂರು ಮಾರ್ಗದ ರಸ್ತೆಯು ತೀರಾ ಹಾಳಾಗಿದ್ದು, ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಯಲಕನೂರಿನಲ್ಲಿರುವ ಕಲ್ಲುಕೋರೆಯಿಂದ ದಿನಂಪ್ರತಿ ನೂರಕ್ಕು ಹೆಚ್ಚು ಲಾರಿಗಳು ಕಲ್ಲು ತುಂಬಿಸಿಕೊಂಡು ಈ ರಸ್ತೆಯಲ್ಲಿ ಚಲಿಸುವದರಿಂದ, ತೀರಾ ಹಾನಿಯಾಗಿದೆ. ರಸ್ತೆಯು ಸಂಪೂರ್ಣ ಗುಂಡಿ ಬಿದ್ದಿದ್ದು, ದ್ವಿಚಕ್ರ ವಾಹನಗಳಿಗೆ ಚಲಿಸಲು ಅಸಾಧ್ಯವಾಗುತ್ತಿದೆ. ಆ ಗುಂಡಿ ರಸ್ತೆಯಲ್ಲಿ ಲಾರಿಗಳು ಚಲಿಸಲು ಆಗದಂತಹ ಸಂದರ್ಭಗಳಲ್ಲಿ ಲಾರಿಯವರೇ ಗುಂಡಿ ಬಿದ್ದಿರುವ ರಸ್ತೆಗೆ ಮಣ್ಣನ್ನು ತಂದು ಹಾಕಿ ಸಮತಟ್ಟು ಮಾಡಿ ಚಲಿಸುತ್ತಿದ್ದಾರೆ. ಆದರೆ, ಇದೀಗ ಮಳೆ ಬೀಳುತ್ತಿರುವ ಪರಿಣಾಮ ಮಣ್ಣು ಕೊಚ್ಚಿ ಹೋಗಿದ್ದು, ಪುನಃ ರಸ್ತೆ ಗುಂಡಿ ಬಿದ್ದಿದೆ. ಈ ರಸ್ತೆಯನ್ನು ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಅವಲಂಭಿಸಿದ್ದಾರೆ.
ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ರಸ್ತೆಯ ದುರಸ್ತಿ ಕಾಮಗಾರಿಯನ್ನು ನಡೆಸಬೇಕೆಂದು ಕೂಡಿಗೆ ಗ್ರಾ.ಪಂ ಸದಸ್ಯ ಟಿ.ಕೆ.ವಿಶ್ವನಾಥ್, ಮಂಜಯ್ಯ, ಧನ್ಯಕೃಷ್ಣ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.