ನಾಪೋಕ್ಲು, ಅ. 19: ಎಮ್ಮೆಮಾಡು ಗ್ರಾಮಪಂಚಾಯಿತಿ ಮತ್ತು ಕಕ್ಕಬ್ಬೆ- ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಒಟ್ಟು ಆರು ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಕೆ.ಜಿ.ಬೊಪಯ್ಯ ಹೇಳಿದರು. ಎಮ್ಮೆಮಾಡು ಕೂಡು ರಸ್ತೆಯಲ್ಲಿ ಆಯೋಜಿಸಿದ್ದ ರಸ್ತೆಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎಮ್ಮೆಮಾಡು ಸೂಫಿ ಶಹೀದ್ ದರ್ಗಾಕ್ಕೆ ತೆರಳುವ 1.68ಕಿ.ಮೀ. ರಸ್ತೆಯನ್ನು ಒಂದೂವರೆ ಕೋಟಿ ರೂ. ಕೊಡಗು ಪ್ಯಾಕೇಜ್ ಮೂಲಕ ಮಾಡಲಾಗುತ್ತಿದೆ.ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕುನಾಡು ಅರಮನೆ ರಸ್ತೆಯನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕುಂಜಿಲ - ಪೈನೆರಿ ರಸ್ತೆಯನ್ನು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವದು. ಸಾರ್ವಜನಿಕರು ರಸ್ತೆ ನಿರ್ಮಾಣಕ್ಕೆ ಅಗತ್ಯ ಸ್ಥಳವನ್ನು ಬಿಟ್ಟುಕೊಟ್ಟು ಕಳಪೆ ಕಾಮಗಾರಿ ಆಗದಂತೆ ನೋಡಿಕೊಳ್ಳಬೇಕೆಂದು ಬೋಪಯ್ಯ ಮನವಿ ಮಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಕೋಡಿಯಂಡ ಇಂದಿರಾ ಹರೀಶ್, ಎಮ್ಮೆಮಾಡು

(ಮೊದಲ ಪುಟದಿಂದ) ಗ್ರಾಮ ಪಂಚಾಯಿತಿ ಅಧ್ಯಕ್ಷ ಆಲಿ, ಸದಸ್ಯ ಚಂಬಾರಂಡ ಮಾಹಿನೆ, ಜಮಾಯತ್ ಅಧ್ಯಕ್ಷ ಕೆ.ಎಸ್. ಅಬ್ದುಲ್ ಖಾದರ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚಂಬಾರಂಡ ರಫೀಕ್, ಸ್ಥಾನೀಯ ಸಮಿತಿ ಅಧ್ಯಕ್ಷ ಸಿ.ಪಿ ಹಸೈನಾರ್ ಹಾಜಿ, ಅಮ್ಮಂಡ ಮನುಮಹೇಶ್, ಶಿವಚಾಳಿಯಂಡ ಜಗದೀಶ್, ಮಂಡೀರ ಜಯ, ಸಣ್ಣುವಂಡ ಡಾ. ಕಾವೇರಪ್ಪ, ಜನಪ್ರತಿನಿಧಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. -ದುಗ್ಗಳ