ಒಡೆಯನಪುರ, ಅ. 19: ಮದ್ಯ ವ್ಯಸನಿಗಳನ್ನು ಮನಪರಿವರ್ತನೆ ಮಾಡುವದರಿಂದ ಮುಂದೆ ಒಳಿತಾಗಲಿದೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಿರಿಕೊಡ್ಲಿ ಮಠದ ಗುರು ಸಿದ್ದಸ್ವಾಮಿ ವಿದ್ಯಾಪೀಠದ ಭದ್ರಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನ ಜಾಗೃತಿ ವೇದಿಕೆ, ಕೊಡ್ಲಿಪೇಟೆ ಗುರುಸಿದ್ದ ಸ್ವಾಮಿ ವಿದ್ಯಾಪೀಠ, ಕೊಡ್ಲಿಪೇಟೆ ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ, ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ 1418ನೇ ಮದ್ಯ ವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮದ್ಯ ವ್ಯಸನಿಗಳ ಮನ ಪರಿವರ್ತನೆ ಮಾಡುವ ಮೂಲಕ ಸಮಾಜದಲ್ಲಿ ಸಂಸ್ಕಾರಯುತ ಜೀವನ ಸಾಗಿಸುವಂತೆ ಸಲಹೆ ನೀಡಿದರು. ಶಿಬಿರಾಧಿಕಾರಿ ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಮಾತನಾಡಿ, ಗ್ರಾಮಾಭಿವೃದ್ಧಿ ಸಂಸ್ಥೆಯನ್ನು 1996ರಲ್ಲಿ ಸ್ಥಾಪಿಸಲಾಗಿದ್ದು, ಯೋಜನೆಯಲ್ಲಿ ಹಲವಾರು ಜನಪ್ರಿಯ ಕಾರ್ಯಕ್ರಮದ ಜೊತೆಯಲ್ಲಿ ಮದ್ಯ ವಜ್ರ್ಯನ ಶಿಬಿರ ಒಂದಾಗಿದೆ ಎಂದರು.

ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಎಸ್. ವರಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ರೋಹಿಣಿ ಸುಬ್ರಮಣ್ಯ ಮಾತನಾಡಿದರು. ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಸದಸ್ಯ ಡಿ. ಭಗವಾನ್, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್, ಕೊಡ್ಲಿಪೇಟೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ತುಂಗ, ಪ್ರಮುಖರಾದ ಡಾ. ಉದಯ್‍ಕುಮಾರ್, ಅಲ್ತಾಫ್ ಹುಸೇನ್, ಡಾ. ಇಕ್ಬಾಲ್ ಹುಸೇನ್, ಎಸ್.ಎಸ್. ಯತೀಶ್, ಧರ್ಮಸ್ಥಳ ಸಂಸ್ಥೆಯ ಆರೋಗ್ಯ ಸಹಾಯಕಿ ಚಿತ್ರ, ಯೋಜನಾಧಿಕಾರಿ ವೈ. ಪ್ರಕಾಶ್, ವಲಯ ಮೇಲ್ವಿಚಾರಕ ರಮೇಶ್, ಕೃಷಿ ಯಂತ್ರಧಾರೆ ವ್ಯವಸ್ಥಾಪಕ ಸದಾಶಿವ, ವಿವಿಧ ಸೇವಾ ಪ್ರತಿನಿಧಿಗಳು ಹಾಜರಿದ್ದರು. ಮದ್ಯ ವಜ್ರ್ಯನ ಶಿಬಿರ ತಾ. 23 ಕ್ಕೆ ಕೊನೆಗೊಳ್ಳಲಿದ್ದು, ಶಿಬಿರದಲ್ಲಿ 23 ಮಂದಿ ಭಾಗವಹಿಸಿದ್ದರು.