ಸುಂಟಿಕೊಪ್ಪ, ಅ. 19: ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವವನ್ನು ನೀಡುವ ಜೊತೆಗೆ ಪೋಷಕರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ತಿಳಿಸಿದರು.
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾನ್‍ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಆದಷ್ಟು ದೂರವಿದ್ದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ಸಮಾಜದಲ್ಲಿ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಡಿ. ಮಣಿ ಮಾತನಾಡಿ, ವಾರ್ಷಿಕ ಶಿಬಿರ ಅಂದಾಗ ಪೋಷಕ ರನ್ನು ಬಿಟ್ಟು ಇರಬೇಕಾಗುತ್ತದೆ. ಆ ಬಗ್ಗೆ ಯೋಚನೆ ಮಾಡದೇ ಗುರುಗಳನ್ನೇ ಪೋಷಕರು ಎಂದು ಭಾವಿಸಿ ಉತ್ತಮ ಸೇವೆಯನ್ನು ಈ ಗ್ರಾಮಕ್ಕೆ ನೀಡಿ ಎಂದು ಕಿವಿಮಾತು ಹೇಳಿದರು. ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಗ್ರಾಮ ನಿಮ್ಮಿಂದಲೇ ಪ್ರಾರಂಭವಾಗಲಿ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ದೂರವಿಡಿ. ಕಂಡಕಂಡಲ್ಲಿ ಪ್ಲಾಸ್ಟಿಕ್ ಮತ್ತು ಕಸವನ್ನು ಎಸೆಯದೆ ಆ ಬಗ್ಗೆ ಎಚ್ಚರ ವಹಿಸಿ ಮತ್ತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಎಂದು ಕಿವಿಮಾತು ಹೇಳಿದರು. ನಾಕೂರು-ಶಿರಂಗಾಲ ಗ್ರಾ.ಪಂ. ಸದಸ್ಯ ವಸಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಭಯಪಡದೇ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಯಾವದೇ ನಿರ್ಲಕ್ಷ್ಯ ತೋರದೆ ಪರಿಸರವನ್ನು ಸಂರಕ್ಷಿಸಿ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ಡಿ. ಚೆನ್ನಮ್ಮ ಪ.ಪೂ. ಕಾಲೇಜಿನ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ಪ್ರತಿ ಯೊಬ್ಬರೂ ಶಿಸ್ತಿನಿಂದ ವರ್ತಿಸಬೇಕು. ಆ ಶಿಸ್ತು ಸಮಾಜಕ್ಕೆ ಮಾದರಿಯಾ ಗಿರಬೇಕು. ತಾವು ಮಾಡುವ ಸೇವೆ ನಿಸ್ವಾರ್ಥವಾಗಿರಬೇಕು ಅದಕ್ಕೆ ಯಾವದೇ ಪ್ರತಿಫಲ ಬಯಸಬಾರದು. ಪ್ರತಿಯೊಬ್ಬರೂ ಅನ್ಯೋನ್ಯತೆಯಿಂದ ಇರಬೇಕು ಎಂದರು. ಕಾನ್‍ಬೈಲ್ ಕಾಫಿ ಬೆಳೆಗಾರರಾದ ಸಿ.ಸಿ. ಚೋಮಣಿ, ನೀಲಮ್ಮ ಪೆಮ್ಮಯ್ಯ, ನಾಕೂರು-ಶಿರಂಗಾಲ ಗ್ರಾ.ಪಂ. ಸದಸ್ಯ ಅಂಬೆಕಲ್ ಚಂದ್ರಶೇಖರ್, ಕಾನ್‍ಬೈಲ್ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಚೆನ್ನಪ್ಪ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಸಿ.ಜಿ. ಮಂದಪ್ಪ, ನಿವೃತ್ತ ಸೈನಿಕ ಕೆ.ಎಂ. ಈರಪ್ಪ ಇದ್ದರು. ಶಿಬಿರಾಥಿಗಳಿಗೆ ಹೆಚ್.ಎಸ್. ಗಗನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಪ್ರಮೀಳಾ ನಿರೂಪಿಸಿ, ಶಿಬಿರಾಧಿಕಾರಿ ಮೋಹನ್ ಹೆಗ್ಡೆ ಸ್ವಾಗತಿಸಿ, ಶಿಬಿರಾರ್ಥಿ ಬಿ.ಹೆಚ್. ಹರ್ಷಿತಾ ವಂದಿಸಿದರು.