ವೀರಾಜಪೇಟೆ, ಅ. 16: ವಿಶ್ವದಾದ್ಯಂತ ಹೆಣ್ಣು ಮಕ್ಕಳು ಎದುರಿಸುತ್ತಿರುವ ವರದಕ್ಷಿಣೆ ಕಿರುಕುಳ ಭೇದಭಾವ ಮತ್ತು ಬಾಲ್ಯವಿವಾಹ ಅಂತಹ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವದರೊಂದಿಗೆ ಸಾಮಾಜಿಕ ಪಿಡುಗು ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ವೀರಾಜಪೇಟೆ ಜೆಎಂಎಫ್‍ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ. ಕೋನಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವೀರಾಜಪೇಟೆ, ತಾಲೂಕು ಕಾನೂನು ಸೇವೆಗಳ ಸಮಿತಿ ವೀರಾಜಪೇಟೆ ವಕೀಲರ ಸಂಘ ವೀರಾಜಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾಕೋಟುಪರಂಬು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ವಿಶೇಷ ಶಿಬಿರದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಗಂಡು-ಹೆಣ್ಣು ಎಂದು ಭೇದಭಾವವಿಲ್ಲದೆ ಎಲ್ಲರು ಸರಿ ಸಮಾನರೆಂದು ಸಮಾಜ ಅರಿತುಕೊಳ್ಳಬೇಕು ಸಾಮಾಜಿಕ ಪಿಡುಗುಗಳ ಬಗ್ಗೆ ಧ್ವನಿ ಎತ್ತಬೇಕು ಎಲ್ಲ್ಲ ರಂಗದಲ್ಲಿಯೂ ಹೆಣ್ಣು ಮಕ್ಕಳು ತಮ್ಮ ಇರುವಿಕೆಯನ್ನು ಗುರುತಿಸಿಕೊಂಡು ಪ್ರಗತಿ ಸಾಧಿಸುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಕೀಲರ ಸಂಘ ಅಧ್ಯಕ್ಷ ಎಂ.ಎಂ. ನಂಜಪ್ಪ, ಹೆಣ್ಣು ಸಂಸಾರದ ಕಣ್ಣುಗಳು ಇದ್ದಂತೆ. ಹೆಣ್ಣು ಭ್ರೂಣ ಹತ್ಯೆಯಂತಹ ಘೋರವಾದ ಕೃತ್ಯವನ್ನು ಸಮಾಜವು ಧಿಕ್ಕರಿಸುವಂತಾಗಬೇಕು. ಲಿಂಗ ತಾರತಮ್ಯ ಮಾಡದೆ ಸರಿ ಸಮಾನವೆಂದು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಮಾತನಾಡಿ, ಪುರುಷ ಪ್ರಧಾನವಾದ ಸಮಾಜದಲ್ಲಿ ಬೆರೆತು ಅರಿತು ಬಾಳುವದು ಗಂಡು ಹೆಣ್ಣುಗಳ ಸಮಾನ ಕರ್ತವ್ಯವಾಗಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ಗೌರವ ದೊರಕುವಂತಾಗಬೇಕು ಅಸಮಾನತೆ ಮತ್ತು ಲಿಂಗತಾರತಮ್ಯದಂತಹ ಸಾಮಾಜಿಕ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಸರ್ಕಾರವು ದಿಟ್ಟಕ್ರಮ ವಹಿಸುವಂತಾಗಬೇಕು ಎಂದು ಹೇಳಿದರು.

ಎನ್.ಎನ್.ಎಸ್. ಅಧಿಕಾರಿ ಸ್ವಾಗತಿಸಿ, ಉಪನ್ಯಾಸಕಿ ರೋಹಿಣಿ ನಿರೂಪಿಸಿ , ರೇಷ್ಮ ವಂದಿಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರು, ಗ್ರಾಮಸ್ಥರು ಮತ್ತು ಎನ್.ಎನ್.ಎಸ್. ಶಿಬಿರಾರ್ಥಿಗಳು ಹಾಜರಿದ್ದರು.