ಸೋಮವಾರಪೇಟೆ, ಅ. 16: ತಾಲೂಕಿನ ಹಾರಂಗಿ ಆಣೆಕಟ್ಟು ನಿರ್ಮಾಣ ಸಂದರ್ಭ ಮುಳುಗಡೆಯಿಂದ ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿರುವ ಎಂ.ಎಂ.ಲಿಂಗರಾಜು ಅವರಿಗೆ ಮುಂದಿನ ಹದಿನೈದು ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಸೂಕ್ತ ನ್ಯಾಯ ಒದಗಿಸದಿದ್ದಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1971ರಲ್ಲಿ ಹಾರಂಗಿ ಆಣೆಕಟ್ಟು ನಿರ್ಮಿಸುವ ಸಂದರ್ಭ ಲಿಂಗರಾಜು ಅವರ ಐಗೂರು ಗ್ರಾಮದ ಸರ್ವೆ ನಂ. 87/18 ರಲ್ಲಿ ನಾಲ್ಕು ಎಕರೆ ಜಾಗ ಮುಳಗಡೆಯಾಗಿದೆ. ನಂತರ ಬದಲಿ ಭೂಮಿ ವಿತರಿಸುವ ಸಂದರ್ಭ ಒಂದೇ ಸರ್ವೆ ನಂಬರ್ ಜಾಗದಲ್ಲಿ ಲಿಂಗರಾಜು ಹಾಗೂ ಇನ್ನೊಬ್ಬರಿಗೆ ಜಾಗ ಗುರುತಿಸಲಾಗಿರುತ್ತದೆ. ಕಂದಾಯ ಇಲಾಖೆಯವರ ತಪ್ಪಿನಿಂದ ನಂತರ ಲಿಂಗರಾಜು ಅವರಿಗೆ ಎಲ್ಲಿಯೂ ಜಾಗ ಸಿಕ್ಕಿಲ್ಲ ಎಂದು ಆರೋಪಿಸಿದರು.

ಬದಲಿ ಭೂಮಿಗಾಗಿ ಕಳೆದ ನಾಲ್ಕು ದಶಕಗಳಿಂದ ಈ ಕುಟುಂಬ ಹೋರಾಟ ಮಾಡುತ್ತಿದ್ದು, ಕಂದಾಯ ಇಲಾಖೆ ಜಾಗ ನೀಡದಿದ್ದಾಗ, 2016ರಂದು ರಾಜ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿರುತ್ತಾರೆ. ಸಂತ್ರಸ್ತ ಕುಟುಂಬಕ್ಕೆ ಜಾಗ ನೀಡುವಂತೆ ಹೈಕೋರ್ಟ್, ಕಂದಾಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ, ಕೊಡಗು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಧಿಕಾರಿಗಳಿಗೆ ಆದೇಶ ನೀಡಿದೆ. ಬದಲಿ ಜಾಗ ಗುರುತಿಸಿ ನೀಡಲು 6 ತಿಂಗಳ ಗಡುವು ನೀಡಲಾಗಿದ್ದು, ಮೂರು ವರ್ಷಗಳು ಕಳೆದರೂ ಜಾಗ ನೀಡಿಲ್ಲ ಎಂದು ದೂರಿದರು.

ಶಾಂತಳ್ಳಿಯಲ್ಲಿ ಜಾಗ ಗುರುತಿಸಿ, ಸರ್ವೆ ಮಾಡಿಸಿದ ಅರ್ಜಿ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿದೆ. ಕಂದಾಯ ಇಲಾಖೆಯ ಕೆಲ ಸಿಬ್ಬಂದಿಗಳು ಗುರುತಿಸಿರುವ ಜಾಗ ಸಿ ಮತ್ತು ಡಿ ಜಾಗವಾಗಿದ್ದು, ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎಂದು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಶಾಂತಳ್ಳಿಯಲ್ಲಿ ಈ ಹಿಂದೆ ಸಿ ಮತ್ತು ಡಿ ಜಾಗಕ್ಕೆ ಹಕ್ಕುಪತ್ರ ನೀಡಲಾಗಿದೆ.

ಸಂತ್ರಸ್ತ ಕುಟುಂಬದವರು ಕಂದಾಯ ಇಲಾಖೆಯ ವಿರುದ್ಧ ಹೈಕೋರ್ಟ್‍ನಲ್ಲಿ ದಾವೇ ಹೂಡಿರುವ ದ್ವೇಷದಿಂದ ತಕರಾರು ತೆಗೆದು ಶೋಷಣೆ ಮಾಡಲಾಗುತ್ತಿದೆ ಎಂದು ಲೋಕೇಶ್ ಆರೋಪಿಸಿದರು. ಹಾರಂಗಿ ಮುಳುಗಡೆಯ ಅನೇಕ ಸಂತ್ರಸ್ತರು ಹಕ್ಕುಪತ್ರ ಪಡೆಯಲಾಗದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಇವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಹಾರಂಗಿ ಆಣೆಕಟ್ಟು ನಿರ್ಮಾಣದಿಂದ ಆಸ್ತಿ ಕಳೆದುಕೊಂಡು ಬದಲಿ ಜಾಗಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಕೆಲ ಸಿಬ್ಬಂದಿಗಳಿಗೆ ಲಂಚ ನೀಡಲು ಚಿನ್ನಾಭರಣವನ್ನು ಕಳೆದುಕೊಂಡಿದ್ದೇವೆ. ಕಂದಾಯ ಇಲಾಖೆಗೆ ಸುತ್ತಿ ಸಾಕಾಗಿ ಹೋಗಿದೆ. ಮೇಲಾಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೈಕೋರ್ಟ್ ಆದೇಶಕ್ಕೂ ಮನ್ನಣೆ ನೀಡುತ್ತಿಲ್ಲ. ನಮಗೆ ದಾರಿ ತೋಚುತ್ತಿಲ್ಲ. ಕಂದಾಯ ಇಲಾಖೆ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಸಂತ್ರಸ್ತರಾದ ರತ್ನ ಲಿಂಗರಾಜು ಹೇಳಿದರು. ಬದಲಿ ಜಾಗ ಕೊಡಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ನೀಡಲು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದರೂ, ಮನವಿಗೆ ಸ್ಪಂದಿಸುತ್ತಿಲ್ಲ ಎಂದರು.

ಗೋಷ್ಠಿಯಲ್ಲಿ ಸಂತ್ರಸ್ತ ಲಿಂಗರಾಜು, ತಾಪಂ ಸದಸ್ಯ ಬಿ.ಬಿ.ಸತೀಶ್, ಕಾಂಗ್ರೆಸ್ ಮುಖಂಡರಾದ ಟಿ.ಈ. ಸುರೇಶ್, ಬಸವರಾಜ್ ಇದ್ದರು.