ವೀರಾಜಪೇಟೆ, ಅ. 16 : ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ಅಮ್ಮತ್ತಿಯ ರೈತ ಸಂಘದ ಮಹಾ ಸಭೆ ನಡೆಯಿತು. ಸಭೆಯಲ್ಲಿ ಐನಂಡ ಜಪ್ಪು ಅಚ್ಚಪ್ಪ ಮಾತನಾಡಿ, ಕಳೆದ ಸಾಲಿನಲ್ಲಿ ಪ್ರಕೃತಿ ಹಾನಿಯಲ್ಲಿ ಮನೆ, ಮಠ, ಆಸ್ತಿ ಕಳೆದುಕೊಂಡವರಿಗೆ ಇನ್ನು ನೆಲೆ ಸಿಕ್ಕಿಲ್ಲ. ಹೊಳೆದಂಡೆಯಲ್ಲಿ ಅಕ್ರಮ ಮನೆ ನಿರ್ಮಿಸಿ ಪ್ರವಾಹದಲ್ಲಿ ಸಿಲುಕ್ಕಿದವರಿಗೆ ಅಧಿಕಾರಿ ವರ್ಗ ನಿವೇಶನ ನೀಡಲು ಕಾಳಜಿ ವಹಿಸುತ್ತಿರುವದರ ಮರ್ಮವೇನು ಎಂದು ಪ್ರಶ್ನಿಸಿದರು.
ಈ ರೀತಿ ವಲಸೆ ಕಾರ್ಮಿಕರಿಗೆ ಮಣೆ ಹಾಕುತ್ತಿರುವದರಿಂದ ಬೆಳೆಗಾರರಿಗೆ, ರೈತರಿಗೆ ತೀವ್ರ ತೊಂದರೆ ಆಗಿದೆ. ಕಾಳು ಮೆಣಸು ಬೆಲೆ ಇಲ್ಲದಿರುವದಕ್ಕೆ ದ. ಭಾರತದ ಬೆಳೆಗಾರರು ಒಂದಾಗಿ ಸೇರಿ ಹೋರಾಟ ನಡೆಸಿ ಕೂಗು ದೆಹಲಿಗೆ ಮುಟ್ಟವಂತೆ ಆದರೆ ಫಲ ಸಿಗುತ್ತದೆ. ಅಲ್ಲದೆ ಕೊಡಗಿನ ವಿವಿಧ ರೈತ ಸಂಘ ಒಂದೆ ವೇದಿಕೆಯಲ್ಲಿ ಹೋರಾಟ ನಡೆಸುವಂತಾಗಬೇಕು ಎಂದರು.
ಹಿರಿಯರಾದ ಗುಹ್ಯದ ರಾಮಚಂದ್ರ ಮಾತನಾಡಿ, ನದಿ ದಂಡೆಯಲ್ಲಿ ಅಕ್ರಮ ವಸತಿ ಬಗ್ಗೆ 80 ರ ದಶಕದಲ್ಲಿಯೇ ಜಿಲ್ಲಾಡಳಿತ ಗಮನ ಸೆಳೆದಿದ್ದರೂ ಉದಾಸೀನ ತೋರಿದರು. ಆದರೆ ಈಗ ಇದರಿಂದ ಆಗುವ ಅನಾಹುತದ ಅರಿವಾಗಿದೆ. ಜೊತೆಗೆ ಶಾಸಕರು, ರಾಜಕೀಯ ಪ್ರಮುಖರು ದೇವರಕಾಡು, ಗೋಮಾಳದಲ್ಲಿ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುದು ಸರಿಯಲ್ಲ ಎಂದರು.
ಮಾಚಿಮಂಡ ಚಿಣ್ಣಪ್ಪ ಮರ ಕಡಿಯುವ ಬಗ್ಗೆ ಮಾತನಾಡಿ, ಮಳೆಯಲ್ಲಿ ಬಿದ್ದ ಮರಗಳನ್ನು ತೆಗೆಯಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಜೊತೆಗೆ ರೈತರ ತೋಟದಲ್ಲಿ ಬಿದ್ದಿರುವ ಕೋಟ್ಯಾಂತರ ರೂ ಮೌಲ್ಯದ ಬೀಟೆ ಮರ ಮಣ್ಣಾಗಿ ಹೋಗುತ್ತಿದೆ. ಇದನ್ನು ಇಲಾಖೆ ತೆಗೆದು ಕೊಂಡು ರೈತರಿಗೆ ಹಣ ನೀಡಬೇಕು. ಇಲ್ಲ ಸ್ವಂತ ಬಳಕೆಗೆ ಅನುಮತಿ ನೀಡಬೇಕು ಇದಕ್ಕಾಗಿ ರೈತ ಸಂಘದ ಹೋರಾಟ ಆಗಬೇಕು ಎಂದರು. ಈ ಕುರಿತು ರೈತ ಸಂಘದ ಸಂಚಾಲಕ ಕೆ.ಎಂ.ಕುಶಾಲಪ್ಪ ಮಾಹಿತಿ ನೀಡಿ 300 ಸಿ.ಎಫ್.ಟಿ ಮರ ಬಳಕೆಗೆ ಈ ಅವಕಾಶ ಇದೆ, ಸೂಕ್ತ ದಾಖಲೆಯೊಂದಿಗೆ ಸ್ವಂತ ಉಪಯೋಗಕ್ಕೆ ಅರ್ಜಿ ಹಾಕಬಹುದು ಎಂದರು. ಕರ್ನಲ್ ಮುಕ್ಕಾಟಿರ ಅಯ್ಯಣ್ಣ ಜಮ್ಮ ತೋಟ ಮಾಲೀಕರಿಗೆ ಇದು ಅನ್ವಯಿಸುತ್ತದೆಯೆ ಎಂದಾಗ, ಸಮಿತಿಯ ಕಾನೂನು ಸಲಹೆಗಾರ ಬಿದ್ದಂಡ ಸುಬ್ಬಯ್ಯ ಅದರ ಬಗ್ಗೆ ಮಾಹಿತಿ ನೀಡಿ ಅರ್ಜಿ ಹಾಕಬಹುದು ಎಂದರು.
ಗದ್ದೆಯನ್ನು ಭೂ ಪರಿವರ್ತನೆ ಮಾಡಿ ನಿವೇಶನ ಮಾಡುತ್ತಿರುವ ಬಗ್ಗೆ ನೆಲ್ಲಮಕ್ಕಡ ಸೋಮಯ್ಯ, ನೆಲ್ಲಮಕ್ಕಡ ಸಾಗರ್ ಮಾಚಯ್ಯ, ಪೂಣಚ್ಚ ಪ್ರಸ್ತಾಪಿಸಿದರು, ಈ ಕುರಿತು ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು.
ರೈತ ಸಂಘದ ಸಂಚಾಲಕ ಕೆ.ಎಂ. ಕುಶಾಲಪ್ಪ ಮಾತನಾಡಿ , ಶಾಸಕರು, ನಮ್ಮ ಜನಪ್ರತಿನಿಧಿಗಳು ಜನರಿಗೆ ಸರರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವದಿಲ್ಲ. ಜೊತೆಗೆ ಅವರು ಸಮಸ್ಯೆಯನ್ನು ಸರಕಾರ ಅಥವಾ ಸದನದಲ್ಲಿ ಪ್ರಸ್ತಾಪಿಸುವದಿಲ್ಲ ಎಂದು ದೂರಿದರು. ಕಾನೂನು ಸಲಹೆಗಾರ ಬಿದ್ದಂಡ ಸುಬ್ಬಯ್ಯ ಮಾತನಾಡಿ, ಅರಣ್ಯ ಇಲಾಖೆ ಕಾನೂನಿನ ಹೆಸರಿನಲ್ಲಿ ರೈತರ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿವೃಷ್ಠಿಯಲ್ಲಿ ಹಾನಿಯಾದವರು ಸೂಕ್ತ ದಾಖಲೆಗಳ ಮೂಲಕ ಪರಿಹಾರಕ್ಕೆ ಅರ್ಜಿ ಹಾಕಿ ತೊಂದರೆ ಆಗಿದ್ದರೆ ಸಂಘ ಬೆಂಬಲಕ್ಕೆ ಇರುತ್ತದೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಸಂಘಟಿತ ಹೋರಾಟದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಸದಸ್ಯ ಮಾಚಿಮಂಡ ಸುರೇಶ್ ಕಳೆದ ಸಾಲಿನ ಹಾಗೂ ಸಂಘಧ ಉಪಾಧ್ಯಕ್ಷ ಕುಟ್ಟಂಡÀ ಚಿಣ್ಣಪ್ಪ ಆಡಳಿತ ಮಂಡಳಿ ವರದಿ ಮಂಡಿಸಿದರು.ವೇದಿಕೆಯಲ್ಲಿ ಕಾರ್ಯದರ್ಶಿ ಮನೆಯಪಂಡ ಗೌತಮ್, ಜಂಟಿ ಕಾರ್ಯದರ್ಶಿ ಮಂಡೇಪಂಡ ವಿಜು, ಖಜಾಂಚಿ ಪಟ್ಟಡ ಅರುಣ್, ಸದಸ್ಯ ಮದ್ರೀರ ಗಣೇಶ್ ಉಪಸ್ಥಿತರಿದ್ದರು.