ಮಡಿಕೇರಿ, ಅ. 15: ಜಿಲ್ಲೆಯಲ್ಲಿ ಪ್ರಾರಂಭಗೊಂಡ 16ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ನವೆಂಬರ್ 10 ರವರೆಗೆ ನಡೆಯಲಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ ತಿಳಿಸಿದ್ದಾರೆ.

ಲಸಿಕೆ ಹಾಕಿಸುವದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದ್ದು, ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬಾರದಂತೆ ತಡೆಗಟ್ಟಬಹುದಾಗಿರುತ್ತದೆ. 19ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ದನ ಹಾಗೂ ಎಮ್ಮೆಗಳ ಸಂಖ್ಯೆ 1,02,904 ಇದ್ದು 16,948 ಹಂದಿಗಳಿರುತ್ತವೆ. ಒಟ್ಟು 1,19,852 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 85 ಲಸಿಕಾದಾರರನ್ನೊಳಗೊಂಡ ಒಟ್ಟು 11 ತಂಡಗಳನ್ನು ರಚಿಸಲಾಗಿದೆ. ಲಸಿಕಾದಾರರು ರೈತರ ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕಲಿದ್ದಾರೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು ಯಾವದೇ ರೀತಿಯ ಶುಲ್ಕವಿರುವದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ 4 ತಿಂಗಳ ಮೇಲ್ಪಟ್ಟ ಎಲ್ಲಾ ದನ ಮತ್ತು ಹಂದಿಗಳಿಗೆ ಲಸಿಕೆ ಹಾಕಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ ಮನವಿ ಮಾಡಿದ್ದಾರೆ.