ಮಡಿಕೇರಿ, ಅ. 15: ಜಿಲ್ಲೆಯಲ್ಲಿ ಸುಸ್ಥಿರ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಮೋಬಿಯಸ್ ಫೌಂಡೇಷನ್ ಬೃಹತ್ ಅರಣ್ಯ ಬೆಳೆಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಸ್ಥಳೀಯ ಕಣಿವೆ, ಐಗೂರು ಮತ್ತು ಹಾರಂಗಿ ನರ್ಸರಿಗಳ ನೆರವಿನೊಂದಿಗೆ ಕೊಡಗು ಪರಿಸರದಲ್ಲಿ ಬೆಳೆಯುವ ಸ್ಥಳೀಯ ಪ್ರಬೇಧದ ಗಿಡಗಳನ್ನೇ ನೆಟ್ಟು ಬೆಳೆಸುವ ಯೋಜನೆ ಇದಾಗಿದೆ. ಕನಿಷ್ಟ ಮೂರು ವರ್ಷಕ್ಕೆ ಅಗತ್ಯವಾದ ಗೊಬ್ಬರ ಹಾಗೂ ನೀರಿನ ವ್ಯವಸ್ಥೆ ಮಾಡುವ ಜತೆಗೆ ಸಾಕು ಪ್ರಾಣಿಗಳಿಂದ ಅರಣ್ಯ ನಾಶವಾಗದಂತೆ ತಡೆಯಲು ಬೇಲಿ ನಿರ್ಮಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಗಿಡ ಬೆಳೆಸಲು ದೊಡ್ಡಬೆಟ್ಟೆ ಗುಡ್ಡ ಮತ್ತು ನಾಪೋಕ್ಲು ಶೈಕ್ಷಣಿಕ ಕ್ಯಾಂಪಸ್‍ನಲ್ಲಿ ಒಟ್ಟು 52 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಸಂಸ್ಥೆಯ ಸಹಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರದೀಪ್ ಬರ್ಮನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪರಿಸರ ಸಂರಕ್ಷಣೆ, ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ ಈ ಅಂಶಗಳು ಪರಿಸರದ ಪ್ರಮುಖ ಆಧಾರಸ್ತಂಭಗಳಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಉಪಲಬ್ಧವಿರುವ ಸಂಪನ್ಮೂಲಗಳನ್ನು ಪುನರುಜ್ಜೀವನ ಗೊಳಿಸಲು ಮುಂದಾಗಿದೆ ಎಂದು ಅವರು ವಿವರಿಸಿದ್ದಾರೆ.

ಸೋಮವಾರಪೇಟೆಯ ಪುಷ್ಪಗಿರಿ ಅರಣ್ಯ ಪ್ರದೇಶದ ಭಾಗವಾದ ದೊಡ್ಡಬೆಟ್ಟೆಯಲ್ಲಿ 500 ಎಕರೆ ಜಾಗ ಗುರುತಿಸಿ, ಮೊದಲ ಹಂತದಲ್ಲಿ 10 ಎಕರೆಯಲ್ಲಿ ಅರಣ್ಯ ಬೆಳೆಸಲಾಗುತ್ತದೆ. ನಾಪೊಕ್ಲು ಶೈಕ್ಷಣಿಕ ಕ್ಯಾಂಪಸ್‍ನಲ್ಲಿ 52 ಎಕರೆ ಪ್ರದೇಶದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಸುಮಾರು ಏಳು ಸಾವಿರ ಗಿಡ ಬೆಳೆಸಲಾಗುತ್ತದೆ ಎಂದು ತಿಳಿಸಿದ್ದಾರೆ.