ವೀರಾಜಪೇಟೆ, ಅ. 14: ಬೇಟೋಳಿ ಗ್ರಾಪಂ. ವ್ಯಾಪ್ತಿಯ ಹೆಗ್ಗಳ ಗ್ರಾಮದಲ್ಲಿ ಕೆ.ಟಿ. ಮುರಳೀಧರ್ ಎಂಬವರು ಕಳೆದ 50 ವರ್ಷಗಳಿಂದ ನೆಲೆಸಿದ್ದು, ತಮ್ಮ ತಂದೆ ಮಾಜಿ ಸೈನಿಕರಾಗಿದ್ದ ದಿ. ಕೆ. ಕರುಣಾಕರನ್ ಅವರಿಗೆ ಸರಕಾರದಿಂದ ಮಂಜೂರಾದ ಜಾಗದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆಲವು ಮಾಜಿ ಸೈನಿಕರು ಇವರು ಕೇರಳದಿಂದ ಬಂದು ಜಾಗ ಅತಿಕ್ರಮಿಸಿಕೊಂಡಿದ್ದಾರೆ ಎಂದು ತಪ್ಪು ಮಾಹಿತಿ ನೀಡಿ ಜಾಗ ಕಬಳಿಸಲು ಯತ್ನಿಸುತ್ತಿರುವದು ಸರಿಯಲ್ಲವೆಂದು ಹೆಗ್ಗಳ ಗ್ರಾಮದ ನಿವಾಸಿ ಕೆ.ಆರ್. ಶ್ರವಣಕುಮಾರ್ ಹೇಳಿದ್ದಾರೆ.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಹೆಗ್ಗಳ ಗ್ರಾಮಸ್ಥರ ಪರವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಶ್ರವಣ ಕುಮಾರ್, ಹೆಗ್ಗಳ ಗ್ರಾಮದಲ್ಲಿ ಮಾಜಿ ಸೈನಿಕರ ಕುಟುಂಬಕ್ಕೆ ಸೇರಿದ ಮುರಳೀಧರ್ ಅವರ ವಿರುದ್ಧ ಅಲ್ಲಿನ ಕೆಲವು ಮಾಜಿ ಸೈನಿಕರ ಗುಂಪು ಕೇರಳದಿಂದ ಬಂದವರು ಇಲ್ಲಿನ ಅರಣ್ಯವನ್ನು ಅತಿಕ್ರಮಿಸುತ್ತಿದ್ದಾರೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಮುರಳೀಧರ್ ಅವರು ಅನೇಕ ವರ್ಷಗಳಿಂದಲೇ ಹೆಗ್ಗಳದಲ್ಲಿ ನೆಲೆಸಿದ್ದು, ತಂದೆಕಾಲದ ಹಂಚಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾಜಿ ಸೈನಿಕರಿಗಾಗಿ ಸರಕಾರದಿಂದ ಮಂಜೂರಾದ 4 ಎಕರೆ ಜಾಗ ಹಾಗೂ 20 ವರ್ಷಗಳ ಹಿಂದೆ ಖರೀದಿಸಿದ್ದ ಜಾಗ ಸೇರಿದಂತೆ ಒಟ್ಟು ಎಂಟು ಎಕರೆ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ತೋಟದ ಆಜು ಬಾಜಿನಲ್ಲಿರುವ ಮಾಜಿ ಸೈನಿಕರು ಕೆಲವರು ಪರೋಕ್ಷವಾಗಿ ಜಾಗ ಮಾರಾಟದ ಬೇಡಿಕೆಯಿಟ್ಟು ಕಬಳಿಸಲು ಯತ್ನಿಸಿ ವಿಫಲಗೊಂಡಾಗ ಇವರು ಕೇರಳದಿಂದ ಬಂದ ವಲಸಿಗರು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿದ್ದಾರೆ. ಇದನ್ನು ಸರಕಾರ ವಶಕ್ಕೆ ಪಡೆಯಬೇಕು ಎಂದು ಆರೋಪಿಸಿರುವದು ಸರಿಯಲ್ಲ. ಇದು ಕುಚೋದ್ಯದ ಸಂಗತಿಯಾಗಿದೆ. ಮುರಳೀಧರ್ ಕೃಷಿ ಮಾಡುತ್ತಿರುವ ಎಂಟು ಎಕರೆ ಜಾಗಕ್ಕೂ ಅಧಿಕೃತ ದಾಖಲೆ ಇದೆ. ಕಾನೂನು ಬದ್ಧವಾಗಿ ಕಂದಾಯವನ್ನು ಪಾವತಿಸುತ್ತಿದ್ದಾರೆ ಎಂದರು.
ಹೆಗ್ಗಳ ಗ್ರಾಮದ ಪ್ರಮುಖರಾದ ಕೆ.ಎಂ. ಅಭಿಷೇಕ್ ಮಾತನಾಡಿ, ಮಾಜಿ ಸೈನಿಕರ ಕುಟುಂಬಕ್ಕೆ ಸೇರಿದ ಮುರಳೀಧರ್ ಅವರಿಗೆ ಹೆಗ್ಗಳದ ಮಾಜಿ ಸೈನಿಕರು ಕೇರಳದ ನಿವಾಸಿ ಎಂದು ಹಣೆಪಟ್ಟಿ ಕಟ್ಟಿ ಅವರನ್ನು ಕೇರಳಕ್ಕೆ ಕಳುಹಿಸುವ ಹುನ್ನಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಮುರಳೀಧರ್ ಅವರ ಸ್ವಾಧೀನದಲ್ಲಿ ಕೃಷಿ ಮಾಡುತ್ತಿರುವ ಎಂಟು ಎಕರೆ ಜಾಗದ ಎಲ್ಲ ದಾಖಲೆಗಳನ್ನು ತಾಲೂಕು ಕಚೇರಿಯ ಕಂದಾಯ ಅಧಿಕಾರಿಗಳು ಖುದ್ದು ಪರಿಶೀಲಿಸಿದ್ದಾರೆ. ಮನೆ ಕಟ್ಟಲು ಗ್ರಾಮ ಪಂಚಾಯಿತಿ ಅನುಮತಿ ನೀಡಿರುವದರಿಂದ ನೆಲ ಸಮತಟ್ಟು ಮಾಡಿ ಇನ್ನು ಮನೆ ಕೆಲಸ ಪ್ರಾರಂಭಿಸಬೇಕಾಗಿದೆ. ಜಾಗದಲ್ಲಿದ್ದ ಮರದ ಕೊಂಬೆಗಳನ್ನು ಕತ್ತರಿಸಿ ಸೌದೆಗಾಗಿ ಶೇಖರಿಸಿಡಲಾಗಿದೆ. ಇದನ್ನು ಅರಣ್ಯ ಇಲಾಖೆಯವರು ಖುದ್ದು ವೀಕ್ಷಿಸಿ ಪರಿಶೀಲಿಸಿದ್ದಾರೆ ಎಂದು ತಿಳಿಸಿದ ಅವರು, ಮುರಳೀಧರ್ ಅವರ ಜಾಗ ಹಾಗೂ ಕೃಷಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಖುದ್ದು ಪತ್ರಕರ್ತರಿಗೆ ತೋರಿಸಿದರು.
ಗೋಷ್ಠಿಯಲ್ಲಿ ಹೆಗ್ಗಳ ಗ್ರಾಮಸ್ಥರುಗಳಾದ ಜೆ.ಎಸ್. ವಿಷ್ಣು ಕುಮಾರ್, ರಾಮಚಂದ್ರ, ಮೋಹನ್ ಕುಮಾರ್ ಮತ್ತಿತರರು ಹಾಜರಿದ್ದರು.
ತಾ. 3.10.2019ರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಅರಣ್ಯ ಪ್ರದೇಶ ಕೇರಳಿಗರ ಪಾಲು; ಸರಕಾರದ ವಶಕ್ಕೆ ಪಡೆಯಲು ಮಾಜಿ ಸೈನಿಕರ ಆಗ್ರಹ’ ಎಂಬ ಸುದ್ದಿಗೆ ಹೆಗ್ಗಳ ಗ್ರಾಮಸ್ಥರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.