ಮಡಿಕೇರಿ, ಅ. 14: ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಕಾವೇರಿ ರಿವರ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಸ್ವಚ್ಛ ಕಾವೇರಿ ಬಗ್ಗೆ ಅರಿವು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 9ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ಈ ವರ್ಷ ತಾ. 21 ರಿಂದ ನವೆಂಬರ್ 8 ರ ತನಕ ನಡೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.
ಮಡಿಕೇರಿ ಪತ್ರಿಕಾ ಭವನದಲ್ಲಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಅಭಿಯಾನ ತಲಕಾವೇರಿಯಿಂದ ಪ್ರಾರಂಭ ಗೊಂಡು ತಮಿಳುನಾಡು ಪೂಂ¥ ïಹಾರ್ ತನಕ ಸಾಗುವುದು. ನದಿ ಜಾಗೃತಿ ಯಾತ್ರೆ ಸಮಿತಿ ಸಂಯೋಜಕರಾದ ಶ್ರೀರಂಗಪಟ್ಟಣ ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರದ ವೇ.ಬ್ರ.ಡಾ.ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಅಖಿಲ ಭಾರತ ಸನ್ಯಾಸಿ ಸಂಘದ ಶ್ರೀ ರಮಾನಂದ ಸ್ವಾಮೀಜಿ, ಶ್ರೀರಂಗಪಟ್ಟಣದ ಶ್ರೀ ಗಣೇಶ ಸ್ವರೂಪಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಯಾತ್ರೆ ತಲಕಾವೇರಿ ಕ್ಷೇತ್ರದಿಂದ ತಾ. 21 ರಂದು ಬೆಳಿಗ್ಗೆ 9 ಗಂಟೆಗೆ ಚಾಲನೆಗೊಳ್ಳಲಿದೆ ಎಂದರು.
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರುಗಳ ಸಾನಿಧ್ಯದಲ್ಲಿ ಕರ್ನಾಟಕ ರಾಜ್ಯ ಸರಕಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಉಪಸ್ಥಿತಿ ಯೊಂದಿಗೆ ಯಾತ್ರೆ ತಲಕಾವೇರಿ ಯಿಂದ ಪ್ರಾರಂಭಗೊಳ್ಳುವದು ಎಂದರು.
ಭಾಗಮಂಡಲ ಸಂಗಮದಲ್ಲಿ ಜೀವನದಿಗೆ ಮಹಾ ಆರತಿ ಬೆಳಗುವದರೊಂದಿಗೆ ನದಿ ತಟದ ಜನರಿಗೆ ನದಿ ಸಂರಕ್ಷಣೆ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ದೊಂದಿಗೆ ಯಾತ್ರೆಯಲ್ಲಿ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳ ಸಾಧು ಸಂತರು, ಕಾರ್ಯಕರ್ತರು 15 ದಿನಗಳ ಕಾಲ ಸಾಗಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಯಾತ್ರಾ ತಂಡ ಎರಡು ದಿನಗಳ ಕಾಲ ಸಾಗಲಿದ್ದು ಈ ಸಂದರ್ಭ ಭಾಗಮಂಡಲ, ಬಲಮುರಿ, ಮೂರ್ನಾಡು, ಅಮ್ಮತ್ತಿ, ಸಿದ್ದಾಪುರ ಮಾರ್ಗವಾಗಿ ಕುಶಾಲನಗರ, ಕಣಿವೆ ಮೂಲಕ ರಾಮನಾಥಪುರಕ್ಕೆ ತೆರಳುವುದು. ಯಾತ್ರಾ ಸಂದರ್ಭ ನದಿ ತಟಗಳಲ್ಲಿ ಆರತಿ ಕಾರ್ಯಕ್ರಮ, ಜನರಿಗೆ ನದಿಯ ಸ್ವಚ್ಚತೆ, ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವದು ಮುಂತಾದ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಮತ್ತು ತಮಿಳುನಾಡು ಭಾಗದಲ್ಲಿ ಸಂಚರಿಸುವ ತಂಡ ಮೂಲ ಕಾವೇರಿಯಿಂದ ಪವಿತ್ರ ತೀರ್ಥ ಒಯ್ಯುವದರೊಂದಿಗೆ ತಮಿಳುನಾಡು ಕಾವೇರಿ ಮತ್ತು ಸಮುದ್ರ ಸೇರುವ ಪೂಂಪ್ಹಾರ್ನಲ್ಲಿ ನವೆಂಬರ್ 8 ರಂದು ಬಂಗಾಳಕೊಲ್ಲಿ ಸಮುದ್ರದಲ್ಲಿ ತೀರ್ಥ ವಿಸರ್ಜನೆ ಮಾಡುವದರೊಂದಿಗೆ ಸಮಾರೋಪ ನಡೆಯಲಿದೆ. ಈ ಸಂದರ್ಭ ಸಾಧುಸಂತರು, ಕಾರ್ಯಕರ್ತರು ನದಿ ಸಂರಕ್ಷಣೆ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಣಯವನ್ನು ರಾಜ್ಯಗಳ ಹಾಗೂ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡ ಲಾಗುವದು ಎಂದು ತಿಳಿಸಿದರು.
ಜೀವನದಿ ಕಾವೇರಿ ಇತ್ತೀಚಿನ ದಿನಗಳಲ್ಲಿ ನದಿ ಪಾತ್ರದ ಜನರಿಗೆ ಪ್ರವಾಹ ಮೂಲಕ ತೊಂದರೆ ಉಂಟಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಈ ಸಮಸ್ಯೆಗೆ ಜಿಲ್ಲಾಡಳಿತದ ಮೂಲಕ ಶಾಶ್ವತ ಪರಿಹಾರಕ್ಕೆ ಆಗ್ರಹಿಸಲಾಗುವದು. ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಹರಿಯುವ ಪಟ್ಟಣ ವಾದ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಹಲವು ಗ್ರಾಮಗಳು ಜಲಾವೃತಗೊಳ್ಳುವದ ರೊಂದಿಗೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತಿರು ವದು ಇತ್ತೀಚಿನ ಬೆಳವಣಿಗೆಯಾಗಿದೆ.
ಈ ಹಿನ್ನಲೆಯಲ್ಲಿ ನದಿ ಅಸ್ತಿತ್ವ ವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಜಲಮೂಲಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲದಿಂದ ಶಿರಂಗಾಲದ ತನಕ ನದಿಯ ಗಡಿ ಗುರುತು ಮಾಡುವ ಕಾರ್ಯಕ್ಕೆ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ನಮ್ಮ ಸಮಿತಿ ಆಗ್ರಹಿಸುತ್ತಿದೆ ಎಂದರು. ಅವೈಜ್ಞಾನಿಕ ಬೆಳವಣಿಗೆಯಿಂದ ಪಟ್ಟಣ ಗ್ರಾಮ ವ್ಯಾಪ್ತಿಗಳಲ್ಲಿ ನದಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನದಿಯ ವ್ಯಾಪ್ತಿ ಕಿರಿದಾಗುತ್ತಿದ್ದು ನದಿ ತಟಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗುತ್ತಿದ್ದು ನೀರಿನ ಹರಿವಿಗೆ ಅಡ್ಡಿ ಉಂಟಾಗುವ ಮೂಲಕ ಪ್ರವಾಹ ಸ್ಥಿತಿ ಎದುರಾಗು ತ್ತಿದೆ. ನದಿ ಒತ್ತುವರಿ ತೆರವುಗೊಳಿಸಿ ಆ ಪ್ರದೇಶವನ್ನು ಸಂಬಂಧಸಿದ ಇಲಾಖೆಗಳ ಮೂಲಕ ಅಭಿವೃದ್ಧಿ ಗೊಳಿಸುವ ಕ್ರಿಯಾಯೋಜನೆ ಸಿದ್ದಪಡಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ರಿವರ್ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೊಣ್ಣಪ್ಪ, ಕಾವೇರಿ ಜಾಗೃತಿ ರಥಯಾತ್ರೆ ಮಾರ್ಗದ ವಿವರಗಳನ್ನು ನೀಡಿ ಅಕ್ಟೋಬರ್ 20 ರಂದು ತಮಿಳು ನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸಾಧು ಸಂತರು, ಕಾರ್ಯಕರ್ತರು ಮೈಸೂರು ಮೂಲಕ ಕುಶಾಲನಗರ ಮಾರ್ಗವಾಗಿ ತಲಕಾವೇರಿಗೆ ಆಗಮಿಸಿ ರಾತ್ರಿ ತಲಕಾವೇರಿಯಲ್ಲಿ ತಂಗುವರು ಎಂದು ಹೇಳಿದರು.
ನಂತರ ಕರ್ನಾಟಕದ ವಿವಿಧೆಡೆಗೆ ತೆರಳುವ ರಥಯಾತ್ರೆ ನವೆಂಬರ್ 8 ರಂದು ತಮಿಳುನಾಡಿನ ಪೂಂಪ್ಹಾರ್ನಲ್ಲಿ ಸಮಾರೋಪ ಗೊಳ್ಳಲಿದೆ ಎಂದು ಮಾಹಿತಿ ಒದಗಿಸಿದರು.
ಗೋಷ್ಠಿಯಲ್ಲಿ ನದಿ ಜಾಗೃತಿ ಸಮಿತಿ ಅಧ್ಯಕ್ಷ ಡಿ.ಆರ್. ಸೋಮಶೇಖರ್, ಕಾವೇರಿ ರಿವರ್ ಸೇವಾ ಟ್ರಸ್ಟ್ನ ಟ್ರಸ್ಟಿ ಕೆ.ಆರ್. ಶಿವಾನಂದನ್, ಪ್ರಮುಖ ಅಕ್ಷಯ್ ಪನ್ಯಾಡಿ ಇದ್ದರು.