ಸೋಮವಾರಪೇಟೆ, ಅ.13: ಮಾಜಿ ಸೈನಿಕರು ತಮ್ಮ ಅನುಭವ ಸ್ವಾಧೀನದಲ್ಲಿರುವ ಸರ್ಕಾರಿ ಪೈಸಾರಿ ಜಾಗವನ್ನು ಯಾವದೇ ಕಾರಣಕ್ಕೂ ತೆರವು ಮಾಡಬಾರದು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಹೇಳಿದರು.

ಇಲ್ಲಿನ ಜೈಜವಾನ್ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಭೆ-ಸಂತೋಷ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರವೇ ಮಾಜಿ ಸೈನಿಕರಿಗೆ ನ್ಯಾಯೋಚಿತವಾಗಿ 10 ಎಕರೆ ಜಾಗ ಒದಗಿಸಬೇಕು. ಆದರೆ ಈ ಬಗ್ಗೆ ವಿಚಾರಿಸಿದರೆ ಜಿಲ್ಲೆಯಲ್ಲಿ ಪೈಸಾರಿ ಜಾಗವೇ ಇಲ್ಲ ಎಂಬ ಉತ್ತರ ನೀಡಲಾಗುತ್ತಿದೆ. ಹಲವಷ್ಟು ಮಂದಿ ನೂರಾರು ಏಕರೆ ಪೈಸಾರಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗುತ್ತಿಲ್ಲ. ಮಾಜಿ ಸೈನಿಕರು ತಮ್ಮ ವಶದಲ್ಲಿರುವ ಸರ್ಕಾರಿ ಜಾಗವನ್ನು ಯಾವದೇ ಕಾರಣಕ್ಕೂ ತೆರವುಗೊಳಿಸಲು ಮುಂದಾಗಬಾರದು. ಅಧಿಕಾರಿಗಳಿಂದ ಒತ್ತಡ ಬಂದರೆ ಸಂಘವೇ ಮುಂದೆ ನಿಂತು ಹೋರಾಟ ನಡೆಸುತ್ತದೆ ಎಂದರು.

ಜಿಲ್ಲೆಯಲ್ಲಿ ಸೈನಿಕ ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿರುವ ಎರಡು ಇಸಿಹೆಚ್‍ಎಸ್ ಸೌಲಭ್ಯ ಕೇಂದ್ರಗಳ ಪೈಕಿ ಒಂದನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಂತಹ ಕಾರ್ಯಕ್ಕೆ ಯಾವದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮಾಜೀ ಸೈನಿಕರಿಗೆ ಕರೆ ನೀಡಿದ ಕಾರ್ಯಪ್ಪ ಅವರು, ಜಿಲ್ಲೆಯಲ್ಲಿ ಮೂಲ ನಿವಾಸಿಗಳು ನೆಲೆಯನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೈಜವಾನ್ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಮಾತನಾಡಿ, ಕಳೆದ 2011ರಲ್ಲಿ ಸ್ಥಾಪನೆಗೊಂಡ ಸೋಮವಾರಪೇಟೆ ಮಾಜಿ ಸೈನಿಕರ ಸಂಘವು ಇದೀಗ ಸ್ವಂತ ನಿವೇಶನ ಹಾಗೂ ಕಟ್ಟಡ ಹೊಂದಿಕೊಳ್ಳುವ ಹಂತಕ್ಕೆ ತಲುಪಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲರೂ ಸಹ ಸಂಘಕ್ಕೆ ಸೇರ್ಪಡೆಗೊಂಡು ಸಂಘವನ್ನು ಇನ್ನಷ್ಟು ಬಲಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಣ್ಣಪ್ಪ, ನಿರ್ದೇಶಕ ಗಣೇಶ್, ಕಾರ್ಯದರ್ಶಿ ಓ.ಎಸ್. ಚಿಂಗಪ್ಪ, ನಿವೃತ್ತ ಮೇಜರ್ ಮಂದಪ್ಪ, ಶನಿವಾರಸಂತೆ ಸಂಘದ ಧರ್ಮಪ್ಪ, ಕುಶಾಲನಗರದ ಪದ್ಮನಾಭ್, ನಾಪೋಕ್ಲುವಿನ ಶಂಭು, ಮೋಟಾರ್ ಯೂನಿಯನ್ ಅಧ್ಯಕ್ಷ ಭರತ್, ಆಟೋ ಯೂನಿಯನ್ ಅಧ್ಯಕ್ಷ ಮೋಹನ್, ತಾ.ಪಂ. ಸದಸ್ಯೆ ಸವಿತ ಈರಪ್ಪ ಅವರುಗಳು ಭಾಗವಹಿಸಿದ್ದರು.

ಇದೇ ಸಂದರ್ಭ ನಿವೃತ್ತ ಸೈನಿಕ ಬೋಪಯ್ಯ ಅವರ ಪತ್ನಿ ದಮಯಂತಿ, ಚಂಗಪ್ಪ ಅವರ ಪತ್ನಿ ಚಂದ್ರಮ್ಮ ಅವರುಗಳನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.