ಗೋಣಿಕೊಪ್ಪ ವರದಿ, ಅ. 12: ಕುಂಜಿಲಗೇರಿ ಮಹಿಳಾ ಮಂಡಳಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ‘ಗಾಂಧಿ ಸಪ್ತಾಹ’ ಕಾರ್ಯಕ್ರಮವನ್ನು ಒಂದು ವಾರ ಆಚರಿಸುವ ಮೂಲಕ ವಿಶೇಷತೆ ಮೂಡಿಸಲಾಯಿತು.
ಮಹಿಳಾ ಮಂಡಳಿ ಸಭಾಂಗಣದಲ್ಲಿ ಮಹಾತ್ಮಗಾಂಧಿ ಜನ್ಮ ದಿನೋತ್ಸವದಂದು ಮಹಿಳಾ ಸದಸ್ಯರು ಸೇರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗಾಂಧಿಗೆ ಅತ್ಯಂತ ಪ್ರಿಯವಾಗಿದ್ದ ಭಗವದ್ಗೀತೆಯನ್ನು ಪೂಜಿಸಲಾಯಿತು.
ಭಗವದ್ಗೀತೆ ಪಠಣ, ಗಾಂಧಿ ಭಜನೆ ಮತ್ತು ಮಂಗಳಾರತಿ ಪ್ರಸಾದ ನೀಡಲಾಯಿತು. ಗಾಂಧೀಜಿ ಜೀವನ, ತತ್ವದರ್ಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಉಳಿದ 6 ದಿನಗಳಲ್ಲಿ ಪೂಜೆ, ಭಜನೆ, ಗೀತಾಪಠಣ ಹಾಗೂ ಗ್ರಾಮ ನೈರ್ಮಲ್ಯದ ಚಟುವಟಿಕೆ ನಡೆಸಲಾಯಿತು.
ಸಪ್ತಾಹದ ಕೊನೆಯ ದಿನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚೈತನ್ಯ ನೀಡಬಹುದಾದ, ಕೃಷಿಗೆ ಪೂರಕವಾದ ಉಪಕಸುಬುಗಳು ಮತ್ತು ಚಟುವಟಿಕೆಗಳ ಬಗ್ಗೆ ಅರಿವು ಮಾಡಿಸುವ ಕಾರ್ಯಕ್ರಮ ನಡೆಸಲಾಯಿತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿಜ್ಞಾನಿಗಳು ಪಾಲ್ಗೊಂಡು ಸೂಕ್ತ ಸಲಹೆ ನೀಡಿದರು.
ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ ಸಿ. ಜಿ. ಕುಶಾಲಪ್ಪ ಮಾತನಾಡಿ, ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಲು ಹಲವಾರು ಪೂರಕ ಉಪ ಕಸುಬುಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವದು ಸೂಕ್ತ. ತಮ್ಮ ಜಮೀನುಗಳನ್ನು ಮಾರಾಟ ಮಾಡವದಾಗಲಿ, ಪಾಳು ಬಿಡುವದಾಗಲಿ ಮಾಡಬಾರದು, ಯುವಜನತೆ ನಗರಗಳ ಯಾಂತ್ರಿಕ ಬದುಕಿನಿಂದ ಬೇಸರಿಸಿ ಹಳ್ಳಿಗಳ ಕಡೆಗೆ ಬರುತ್ತಿರುವ ಪ್ರಕ್ರಿಯೆ ಆರಂಭವಾಗುತ್ತಿದೆ. ಭವಿಷ್ಯದಲ್ಲಿ ಕೃಷಿ ಒಂದು ವಾಣಿಜ್ಯ ಚಟುವಟಿಕೆಯಾಗಿ ಬೆಳೆಯುವ ಅವಕಾಶಗಳು ವಿಪುಲವಾಗಿರುವದರಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹಿಂದೇಟು ಹಾಕಬಾರದು ಎಂದರು.
ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ ಆರ್. ಎನ್. ಕೆಂಚರೆಡ್ಡಿ ಮಾತನಾಡಿ, ಜೇನು ಕೃಷಿಯ ಮಹತ್ವ ತಿಳಿಸಿ, ಜೇನು ಕೃಷಿಗೆ ಮುಂದಾಗಬೇಕಿದೆ ಎಂದರು.
ಬೇಸಾಯಶಾಸ್ತ್ರಜ್ಞ ಡಾ. ಬಸವಲಿಂಗಯ್ಯ ಅವರು ಎರೆಹುಳು ಗೊಬ್ಬರ ತಯಾರಿಕೆಯ ಬಗ್ಗೆ ವಿವರಣೆ ನೀಡಿದರು.
ಅರಣ್ಯ ಮಹಾವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳಾದ ಧನುಷ್ ಅವರಿಂದ ಕೊಡಗಿನ ಕಾಡುಹಣ್ಣುಗಳ ಬಗ್ಗೆ, ಡಾ. ಕಾವೇರಮ್ಮ ದೇವಯ್ಯ ಆರ್ಕಿಡ್ ಕೃಷಿಯ ಬಗ್ಗೆ ಹಾಗೂ ವಿದ್ಯಾಶ್ರೀ ವಿವಿಧ ತರಕಾರಿ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.
ಮಂಡಳಿ ಅಧ್ಯಕ್ಷೆ ಚೀಯಂಡಿರ ವಿಲೀನಾ ಸುರೇಶ್, ಕಾರ್ಯದರ್ಶಿ ಮುಕ್ಕಾಟಿರ ಎಸ್. ಅಕ್ಕಮ್ಮ, ಗ್ರಾಮದ ಹಿರಿಯರಾದ ಮುಕ್ಕಾಟಿರ ಚೋಟು ಅಪ್ಪಯ್ಯ, ಮುಕ್ಕಾಟೀರ ಶಂಭು ಉಪಸ್ಥಿತರಿದ್ದರು.