ಕಣಿವೆ, ಅ. 13: ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆದು ಚುನಾಯಿತ ಸದಸ್ಯರ ನೇಮಕವಾಗಿ ನವೆಂಬರ್ 1ಕ್ಕೆ ಬರೋಬ್ಬರಿ ಒಂದು ವರ್ಷ ಕಳೆಯುತ್ತದೆ. ಆದರೆ ರಾಜ್ಯದ ಯಾವೊಂದು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಚುನಾಯಿತರ ಸ್ಪರ್ಶ ಸಿಗುತ್ತಿಲ್ಲ. ಇದರಿಂದಾಗಿ ಚುನಾಯಿತರಲ್ಲಿ ಒಂದು ರೀತಿಯ ತಳಮಳ ಹಾಗೂ ಒಳಬೇಗುದಿ ಜಾಸ್ತಿಯಾಗುತ್ತಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಾಜ್ಯದ 48ಕ್ಕೂ ಹೆಚ್ಚಿನ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದು ನವೆಂಬರ್ 2018 ರ ತಾ. 1 ರಂದು ಫಲಿತಾಂಶ ಪ್ರಕಟಗೊಂಡಿತ್ತು. ಪಂಚಾಯತ್ ರಾಜ್ ನಿಯಮಗಳನ್ನು ಓದಿಕೊಳ್ಳದೇ ಅಥವಾ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಅರಿಯದ, ಇದೇ ಮೊದಲ ಬಾರಿಗೆ ಆಯ್ಕೆಯಾದ ಅದೆಷ್ಟೋ ಚುನಾಯಿತರಿಗೆ ಆಡಳಿತ ಮಂಡಳಿ ರಚಿಸುವಲ್ಲಿ ಈ ಹಿಂದಿನ ಮೈತ್ರಿ ಸರ್ಕಾರ ಮತ್ತು ಈಗಿನ ಬಿಜೆಪಿ ಸರ್ಕಾರ ತೋರಿರುವ ನಿರಾಸಕ್ತಿ ಯಿಂದಾಗಿ ಚುನಾಯಿತರು ಹೈರಾಣಾ ಗಿದ್ದಾರೆ. ತಮ್ಮ ವಾರ್ಡ್‍ಗಳಲ್ಲಿ ಗೆದ್ದಿರುವ ಚುನಾಯಿತರು ಕಳೆದ ಒಂದು ವರ್ಷದಿಂದ ಮತದಾರರಿಗೆ ಏನೂ ಕೆಲಸ ಮಾಡಿಕೊಡಲು ಆಗದೆ ಅಸಹಾಯಕತೆಯಲ್ಲಿದ್ದಾರೆ. ಪಟ್ಟಣ ಪಂಚಾಯಿತಿಗಳಲ್ಲಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಮಾತಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ ಎಂಬ ಬೇಗುದಿ ನಿರ್ಮಾಣಗೊಂಡಿದೆ.
ರೋಸ್ಟರ್ ಪದ್ಧತಿ ರಾದ್ದಾಂತ: ರಾಜ್ಯದಲ್ಲಿ 175ಕ್ಕೂ ಹೆಚ್ಚು ಸ್ಥಳೀಯ ಪಟ್ಟಣ ಪಂಚಾಯಿತಿಗಳಿದ್ದು, ಹಲವು ಪಂಚಾಯಿತಿಗಳಲ್ಲಿ ಈ ಹಿಂದಿನ ಅವಧಿಯಲ್ಲಿ ಇದ್ದ ಮೀಸಲಾತಿಯೇ ಮತ್ತೆ ಪುನರಾವರ್ತನೆ ಆಗಿದೆ. ಕೆಲವು ಪಂಚಾಯಿತಿಗಳಿಗೆ ಕಳೆದ ಹಲವು ಅವಧಿಯಿಂದಲೂ ಏಕತೆರನ ಮೀಸಲಾತಿಯೇ ಇದೆ. ಅದು ಬದಲಾಗಬೇಕೆಂದು ಕಳೆದ ವರ್ಷದ ನವೆಂಬರ್‍ನಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯ ಬಳಿಕ ಸರ್ಕಾರ ಪ್ರಕಟಿಸಿದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯ ರೋಸ್ಟರ್ ಪದ್ಧತಿ ಅವೈಜ್ಞಾನಿಕ ವಾಗಿದೆ ಎಂದು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದೇ ಈಗಿನ ಅವಾಂತರಕ್ಕೆ ಕಾರಣವಾಗಿದೆ. ಸರ್ಕಾರಗಳು ಪಂಚಾಯಿತಿ ವ್ಯವಸ್ಥೆಯ ಈ ಲೋಪಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಅಡ್ವೋಕೇಟ್ ಜನರಲ್ ಮೂಲಕ ನ್ಯಾಯಾಂಗದ ಗಮನಸೆಳೆಯಬೇಕಿದೆ.
ಪಂಚಾಯಿತಿ ಆಡಳಿತ ವ್ಯವಸ್ಥೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರ ಕೊಡದೇ ಅಧಿಕಾರ ಶಾಹಿ ವ್ಯವಸ್ಥೆ ಮುಂದುವರೆದಿರುವದು ಶೋಚನೀಯವಾದುದು ಎಂದು ಅನೇಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ.