ಮಡಿಕೇರಿ, ಅ. 11: ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಮೈಸೂರಿನ ಕೊಡವ ದೀನಬಂದು ಚಾರಿಟೇಬಲ್ ಟ್ರಸ್ಟ್‍ನ ವತಿಯಿಂದ ಅರ್ಹ ಕೊಡವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಪದವಿಪೂರ್ವ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ದೀನಬಂದು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಕಟ್ಟೆರ ಕಾರ್ಯಪ್ಪ, ಖಜಾಂಚಿ ಜಯಕುಮಾರ್ ಮತ್ತು ಟ್ರಸ್ಟ್‍ನ ಪದಾಧಿಕಾರಿಗಳು ಹಾಜರಿದ್ದರು.

ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದ ಕಟ್ಟೆರ ಕಾರ್ಯಪ್ಪ ಅವರು ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಹಾಗೂ ದಾನಿಗಳಿಂದ ಸಂಗ್ರಹಿದ ಹಣವನ್ನು ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೀಡಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. ಪ್ರೋತ್ಸಾಹ ಧನ ಪಡೆದು ಕೊಂಡಿರುವ ವಿದ್ಯಾರ್ಥಿಗಳು ಹಣವನ್ನು ಸರ್ಮಪಕವಾಗಿ ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಜಯಕುಮಾರ್ ಮಾತನಾಡಿ, ದೀನಬಂದು ಚಾರಿಟೇಬಲ್ ಟ್ರಸ್ಟ್ ಸಾಗಿಬಂದ ಹಾದಿ ಹಾಗೂ ದ್ಯೇಯೊದ್ದೇಶಗಳನ್ನು ವಿವರಿಸಿದರು. ಪ್ರೊ. ಕಮಲಾಕ್ಷಿಯವರು ದೀನಬಂದು ಚಾರಿಟೇಬಲ್ ಟ್ರಸ್ಟ್‍ನ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಬಿ.ಎ. ವಿದ್ಯಾರ್ಥಿ ಕಾವೇರಪ್ಪ ಬಿ.ಎಂ. ಮಾಡಿದರು. ಅಂತಿಮ ಬಿ.ಬಿ.ಎ. ವಿದ್ಯಾರ್ಥಿ ಕುಶಾಲಪ್ಪ ಸ್ವಾಗತಿಸಿ, ದ್ವಿತೀಯ ಬಿ.ಎ. ವಿದ್ಯಾರ್ಥಿ ಬೆಳ್ಳಿಯಪ್ಪ ವಂದಿಸಿದರು.