ಸಿದ್ದಾಪುರ, ಅ.11: ಸಂತ್ರಸ್ತರಿಗೆ ಮನೆ ನಿರ್ಮಿಸಲು ಜಿಲ್ಲಾಡಳಿತದ ವತಿಯಿಂದ ಅಭ್ಯತ್ ಮಂಗಲದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಲಾಯಿತು. ನೆಲ್ಯಹುದಿಕೇರಿ ಭಾಗದಲ್ಲಿ ಈ ಬಾರಿಯ ಪ್ರವಾಹಕ್ಕೆ ಸಿಲುಕಿ ನದಿ ತೀರದ ನೂರಾರು ಮನೆಗಳು ಹಾನಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಸ್ಥಳೀಯ ಸರಕಾರಿ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು ಶಾಶ್ವತ ಸೂರಿಗಾಗಿ ಪಟ್ಟು ಹಿಡಿದಿದ್ದಾರೆ.ಇದರಿಂದಾಗಿ ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡುವ ನಿಟ್ಟಿನಲ್ಲಿ ಅಭ್ಯತ್ ಮಂಗಲ ಗ್ರಾಮದ ಸರ್ವೆ ನಂ. 87/2 ಸರಕಾರಿ ಜಾಗವನ್ನು ಸರ್ವೆ ಕಾರ್ಯ ನಡೆಸಿ ಗಡಿ ಭಾಗವನ್ನು ಗುರುತಿಸಲಾಯಿತು. ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಹಾಗೂ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಜವರೇಗೌಡ ಮಾತನಾಡಿ, ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವು ತೋಟದ ಮಾಲೀಕರು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೋಟಗಳನ್ನಾಗಿ ಮಾಡಿ ನಂತರ ತೆರವುಗೊಳಿಸಲು ಮುಂದಾಗುವ ಸಂದರ್ಭದಲ್ಲಿ ನ್ಯಾಯಾಲಯದ ತಡೆಯಾಜ್ಞೆ ತರುತ್ತಿರುವದು ಸರಿಯಾದ ಕ್ರಮವಲ್ಲ. ಇದರಿಂದಾಗಿ ಸಂತ್ರಸ್ತರಿಗೆ ಸೂರು ಒದಗಿಸಲು ಸಮಸ್ಯೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಡೆಯಾಜ್ಞೆ ವಿರುದ್ಧ ನ್ಯಾಯಾಲಯಕ್ಕೆ ಜಿಲ್ಲಾಡಳಿತ ಮನವರಿಕೆ ಮಾಡಿ ಕೊಡಲಾಗಿದೆ ಎಂದರು.
ಅಭ್ಯತ್ ಮಂಗಲ ಗ್ರಾಮದಲ್ಲಿ ಕಾಫಿ ತೋಟ ಹೊಂದಿಕೊಂಡಿರುವ ಪಿ.ಸಿ. ಕುಞÂ್ಞ ಮುಹಮ್ಮದ್ ತನ್ನ ತೋಟದಲ್ಲಿ ಜಿಲ್ಲಾಡಳಿತ ಜಾಗವನ್ನು ತೆರವುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ದಿಂದ ಒಂದು ತಿಂಗಳ ಅವಧಿಗೆ ತಡೆಯಾಜ್ಞೆ ತಂದಿರುವದಾಗಿ ನ್ಯಾಯಾಲಯದ ಪ್ರತಿಯೊಂದಿಗೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿರುವದಾಗಿ ತಿಳಿದುಬಂದಿದೆ.
ಈ ಸಂದರ್ಭ ಸ್ಥಳದಲ್ಲಿ ಡಿ.ಡಿ.ಎಲ್.ಆರ್ ಶ್ರೀನಿವಾಸ್, ಕುಶಾಲನಗರ ಹೋಬಳಿ ಉಪ ತಹಶೀಲ್ದಾರ್ ಚಿನ್ನಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್, ಸರ್ವೆಯರ್ ಮಂಜುನಾಥ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
-ಚಿತ್ರ ವರದಿ: ವಾಸು