ಮಡಿಕೇರಿ, ಅ. 9: ವಿಜಯದಶಮಿ ಮರುದಿನವಾದ ಇಂದು (ತಾ.9) ಮಂಜಿನ ನಗರಿ ಮಡಿಕೇರಿಯಲ್ಲಿ ಒಂದೆಡೆ ನೀರವ ವಾತಾವರಣವಿದ್ದರೂ ಅಲ್ಲಲ್ಲಿ ಮಂಟಪಗಳನ್ನು ವಿಭಜಿಸುವ ಚಟುವಟಿಕೆಗಳು ನಡೆಯುತ್ತಿತ್ತು. ಕೆಲವು ರಸ್ತೆಗಳಲ್ಲಿ ಮಂಟಪಗಳು ಡಿಜೆ, ಹಾಡಿನೊಂದಿಗೆ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂದಿದೆ. ಅಪರಾಹ್ನದ ತನಕ ಉತ್ತಮ ರೀತಿಯಲ್ಲಿ ಬಿಸಿಲಿನ ವಾತಾವರಣವಿತ್ತಾದರೂ ಅಪರಾಹ್ನ ಎರಡು ಗಂಟೆಯ ಬಳಿಕ ಈ ಚಿತ್ರಣ ಮರೆಯಾಯಿತು.
ಇದ್ದಕ್ಕಿದ್ದಂತೆ ಮೋಡ ಆವರಿ ಸುವದರೊಂದಿಗೆ, ಭಾರೀ ಶಬ್ದದೊಂದಿಗೆ ಸಿಡಿಲೂ ಕಂಡು ಬಂದು ಕೆಲಹೊತ್ತು ಇದರೊಂದಿಗೆ ಧಾರಾಕಾರ ಮಳೆ ಸುರಿಯಿತು. ಇದರಿಂದ ರಸ್ತೆ ಬದಿಯಲ್ಲಿ ಅಂಗಡಿ ಗಳನ್ನು ತೆರೆದು ವ್ಯಾಪಾರ ನಡೆಸುತ್ತಿ ದ್ದವರು, ಇನ್ನಿತರರು ಕೆಲಸಮಯ ಸಮಸ್ಯೆ ಎದುರಿಸ ಬೇಕಾಯಿತು. ಆದರೂ ಧಾರಾಕಾರ ವಾಗಿ ಮಳೆ ಸುರಿದು ಅಲ್ಲಲ್ಲಿ ತುಂಬಿದ್ದ ಕಸ - ಕಡ್ಡಿಗಳು, ಇನ್ನಿತರ ತ್ಯಾಜ್ಯಗಳು ನೀರಿನ ರಭಸದಿಂದಾಗಿ ನಗರ ಚರಂಡಿಗಳ ಮೂಲಕ ಕೊಚ್ಚಿ ಹೋಗಿದ್ದವು.
ಕಳೆದ ರಾತ್ರಿಯಿಡೀ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗಳು ತುಂಬಿದ್ದರಿಂದ ನಗರದಲ್ಲಿ ಒಂದಷ್ಟು ಕಸದ ರಾಶಿಗಳು ಅಲ್ಲಲ್ಲಿ ಹರಡಿದ್ದು, ಈ ಮಳೆಯಿಂದಾಗಿ ನಗರ ಸ್ವಚ್ಛವಾದಂತಾಯಿತು ಎಂದು ಸ್ಥಳೀಯ ನಿವಾಸಿಗಳು ಮಾತನಾಡಿ ಕೊಳ್ಳುತ್ತಿದ್ದರು. ಸಂಜೆ ವೇಳೆಗೆ ವಾತಾವರಣ ಮತ್ತೆ ಸಹಜತೆಯಿಂದ ಕೂಡಿತ್ತು.