ಗೋಣಿಕೊಪ್ಪಲು, ಅ.9: ಒಬ್ಬ ಜನಪ್ರತಿನಿಧಿಯಾಗಿ ನನ್ನ ಪಾಲಿನ ಕರ್ತವ್ಯ ನಿರ್ವಹಿಸುವ ಮೂಲಕ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಸರ್ಕಾರದಿಂದ 30 ಲಕ್ಷ ಅನುದಾನವನ್ನು ಮಂಜೂರು ಮಾಡಿಸಿದ್ದೇನೆ. ಇದು ನನ್ನ ಜವಾಬ್ದಾರಿಯಾಗಿತ್ತು. ಎಂದು ಕ್ಷೇತ್ರದ ಶಾಸಕರು ಹಾಗೂ ಕಾವೇರಿ ದಸರಾ ಸಮಿತಿಯ ಗೌರವ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.
ನಗರದ ಪ್ರಾಥಮಿಕ ಶಾಲೆಯ ಕಾವೇರಿ ಕಲಾ ವೇದಿಕೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ 41ನೇ ದಸರಾ ಜನೋತ್ಸವ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು ಒಬ್ಬ ಜವಾಬ್ದಾರಿ ಜನಪ್ರತಿನಿಧಿಯಾದವರು ಕೆಲಸ ಮಾಡುವದು ಕರ್ತವ್ಯವಾಗಿದೆ. ಇದು ನನ್ನ ಪಾಲಿನ ಕರ್ತವ್ಯವಾಗಿ ಕೆಲಸ ಮಾಡಿದ್ದೇನೆ. ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಕಾವೇರಿ ಕಲಾ ವೇದಿಕೆಯಲ್ಲಿ 9 ದಿನಗಳ ಕಾಲ ವಿವಿಧ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಿದ್ದಿರಿ ಇದರಿಂದ ಪ್ರತಿಭೆಗಳು ಹೊರ ಹೊಮ್ಮಲು ಅವಕಾಶವಾಗಿದೆ. ಸಮಾಜದ ಎಲ್ಲಾ ವರ್ಗದ ಜನ ಇದರ ಪ್ರಯೋಜನ ಪಡೆದಿದ್ದಾರೆ. ವಿಶೇಷವಾಗಿ ಕೊಡಗಿನ ವೀರಪರಂಪರೆ ಹೊಂದಿರುವ ಪೊನ್ನಂಪೇಟೆಯ ಯೋಧ ಶೌರ್ಯಚಕ್ರ ಪ್ರಶಸ್ತಿ ವಿಜೇತ ಹೆಚ್.ಎನ್ ಮಹೇಶ್ ಹಾಗೂ ಕುಟುಂಬವನ್ನು ಈ ವೇದಿಕೆಯು ಸನ್ಮಾನಿಸಿ ಗೌರವಿಸಿರುವದು ಹೆಮ್ಮೆ ತಂದಿದೆ ಎಂದ ಅವರು ಗೋಣಿಕೊಪ್ಪ ದಸರಾ ವಿಶೇಷತೆಯಿಂದ ಕೂಡಿದೆ 41 ವರ್ಷದಿಂದ ತನ್ನದೇ ಆದ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತ ಜನರ ಮನಸ್ಸನ್ನು ಗೆದ್ದಿದೆ. ಆದರೆ ಪ್ರಚಾರದ ಕೊರತೆ ಈ ಬಾರಿಯ ದಸರಾದಲ್ಲಿ ಎದ್ದು ಕಾಣುವಂತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಸಮಿತಿಯ ಕಾರ್ಯಾಧ್ಯಕ್ಷ ಕೆ.ಪಿ. ಬೋಪಣ್ಣ, ಮಾತನಾಡಿ ಹಲವು ಎಡರು ತೊಡರುಗಳ ನಡುವೆ 41ನೇ ದಸರಾ ಜನೋತ್ಸವ ಯಶಸ್ವಿಯಾಗಿದೆ. ಈ ನಾಡಿನ ಜನತೆಯ ಸಹಕಾರ ಸ್ಮರಣೀಯ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ.ಎ.ಹರೀಶ್ ಗೋಣಿಕೊಪ್ಪ ದಸರಾ ಇನ್ನಷ್ಟು ವಿಶೇಷತೆಯನ್ನು ಕಾಣುವಂತಾಗಬೇಕು ಎಂದರು. ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ ಸರ್ಕಾರದ ಅನುದಾನವನ್ನು ಸಕಾಲದಲ್ಲಿ ತರುವಲ್ಲಿ ಕ್ಷೇತ್ರದ ಶಾಸಕರು ವಿಶೇಷ ಆಶಕ್ತಿ ವಹಿಸಿದ ಹಿನೆÀ್ನಲೆಯಲ್ಲಿ ಅನುದಾನ ಮಂಜೂರಾಗಿದೆ. ಇದರ ಖ್ಯಾತಿ ಶಾಸಕರಿಗೆ ಸಲ್ಲಬೇಕು ಎಂದರು.
ದಸರಾ ಜನೋತ್ಸವದ ಅಂಗವಾಗಿ ಪೊನ್ನಂಪೇಟೆಯ ಯೋಧ ಶೌರ್ಯಚಕ್ರ ಪ್ರಶಸ್ತಿ ವಿಜೇತ ಹೆಚ್.ಎನ್ ಮಹೇಶ್ ಹಾಗೂ ಕುಟುಂಬವನ್ನು ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳಾಗಿ ಭಾಗವಹಿಸಿ ಸಮಿತಿಯ ಅಧ್ಯಕ್ಷರಾದ ಕೆ.ಜಿ.ರಾಮಕೃಷ್ಣ, ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರಾದ ಕೆ.ಬಿ.ಗಿರೀಶ್ ಗಣಪತಿ, ಕೊಡಗು ಜಿಲ್ಲಾ ಚೇಂಬರ್ನ ಅಧ್ಯಕ್ಷ ಬಿ.ಎನ್.ಪ್ರಕಾಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ ಮಾತನಾಡಿದರು. ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ವಂದಿಸಿದರು. ಸಮಿತಿಯ ನಿರೂಪಕಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಕನ್ನಡ ಕೋಗಿಲೆ,ಸರಿಗಮಪ ತಂಡದ ಪುರುಷೋತ್ತಮ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.
-ಚಿತ್ರ ಸುದ್ದಿ,ಹೆಚ್.ಕೆ. ಜಗದೀಶ್