*ಗೋಣಿಕೊಪ್ಪಲು, ಅ. 9: ಇಲ್ಲಿನ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಸ್ತಬ್ದ ಚಿತ್ರ ಮೆರವಣಿಗೆ ಎಂದಿನಂತೆ ನಡೆದರೂ, ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದವು. ಪಾಕಿಸ್ತಾನದ ಉಗ್ರರು ಪುಲ್ವೋಮ ಬಾಲ್‍ಕೋಟ್ ಮೇಲೆ ನಡೆಸಿದ ದಾಳಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿ, ಮೊಬೈಲ್ ಬಳಕೆಯಿಂದ ಅಪರಾಧವೆಸಗುತ್ತಿರುವ ವಿದ್ಯಾರ್ಥಿಗಳು, ಭೂ ಪರಿಸರ ನಾಶದಿಂದ ಎದುರಾಗುತ್ತಿರುವ ಪ್ರಾಕೃತಿಕ ವಿಕೋಪ ಮೊದಲಾದ ಘಟನೆಗಳನ್ನು ಬಿಂಬಿಸುವ ಚಿತ್ರಗಳು ಗಮನ ಸೆಳೆದವು. ಆದರೇ ಈ ಬಾರಿ ಕೇವಲ 7 ಸ್ತಬ್ದ ಚಿತ್ರಗಳು ಮಾತ್ರ ಪಾಲ್ಗೊಂಡಿದ್ದರಿಂದ ಪ್ರೇಕ್ಷಕರು ತೀರ ನಿರಾಶೆ ಅನುಭವಿಸಿದರು ಎಂಬ ಮಾತು ಕೇಳಿ ಬಂತು.
4 ವರ್ಷಗಳ ಹಿಂದೆ 36 ಸ್ತಬ್ದ ಚಿತ್ರಗಳು ಪಾಲ್ಗೊಂಡಿರುತ್ತಿದ್ದವು. ಅವುಗಳ ಸಂಖ್ಯೆ ವರ್ಷ ಕಳೆದಂತೆ ಕ್ಷೀಣಿಸತೊಡಗಿದ್ದವು. ಕಳೆದ ಬಾರಿ ಕೇವಲ 4 ಚಿತ್ರಗಳು ಇದ್ದವು. ಈ ಬಾರಿ ಮೂರು ಮಾತ್ರ ಹೆಚ್ಚಾಗಿದ್ದವು.
ಭಗತ್ ಸಿಂಗ್ ಯುವಕ ಸಂಘದವರು ಪುಲ್ವೋಮ ಘಟನೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದರು. ಚೆನ್ನಂಗೊಲ್ಲಿ ರುದ್ರಬಾಯ್ಸ್ ತಂಡದ ಮೊಬೈಲ್ ಬಳಕೆಯಿಂದ ಅಪರಾಧ ವೆಸಗಿ ಜೈಲು ಪಾಲಾಗುತ್ತಿರುವ ಎಳೆಯ ಮಕ್ಕಳು, ಪ್ರಾಕೃತಿಕ ವಿಕೋಪದಿಂದ ಪ್ರಾಣ ಕಳೆದುಕೊಂಡ ಗರ್ಭಿಣಿ, ಪೊನ್ನಂಪೇಟೆ ಜೆಬಿ ಪುರುಷ ಸ್ವಹಾಯ ಸಂಘದ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುತ್ತಿರುವ ಪರಿಸರ ಹಾನಿ ಹಾಗೂ ಜೀವಹಾನಿ, ರಾಮಸೇನೆ ಸಂಘದ ಪ್ಲಾಸ್ಟಿಕ್ ತಂದ ಆತಂಕ, ಸರ್ವಂ ಸಂಘದ ಭೂಮಿಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಮೊದಲಾದವು ಗಮನ ಸೆಳೆದವು.
ದಸರಾ ನಾಡ ಹಬ್ಬ ಸಮಿತಿ ಆಯೋಜಿಸಿದ್ದ ಸ್ತಬ್ದ ಚಿತ್ರ ಮೆರವಣಿಗೆಯನ್ನು ಆರ್ ಎಂಸಿ ಆವರಣದಲ್ಲಿ ಉದ್ಘಾಟಿಸಲಾಯಿತು. ಬಳಿಕ ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಉಮಾಮಹೇಶ್ವರಿ ದೇವಸ್ಥಾನದ ಬಳಿ ಬಲಕ್ಕೆ ತಿರುಗಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮೈದಾನದಲ್ಲಿ ಸಮಾಪ್ತಿ ಗೊಂಡವು. ಮೆರವಣಿಗೆಯಲ್ಲಿ ಡೊಳ್ಳುಕುಣಿತ ಉತ್ತಮ ಸದ್ದುಮಾಡಿತು.
ಪ್ರೇಕ್ಷಕರ ಕೊರತೆ : ಹಿಂದೆ ಕಲಾತ್ಮಕವಾದ ಸ್ತಬ್ದಚಿತ್ರಗಳು ವೀಕ್ಷಿಸಲು ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಖಾಸಗಿ ಬಸ್‍ಗಳ ಮೇಲೆ ಜನರು ನಿಂತು ನೋಡುತ್ತಿದ್ದರು. ಆದರೆ ಈ ಬಾರಿ ಜನರು ಹೆಚ್ಚಿನದಾಗಿ ಕಂಡು ಬರಲಿಲ್ಲ.
ವೆಚ್ಚ ದುಬಾರಿ: ಭಗತ್ ಸಿಂಗ್ ದೇಶಪ್ರೇಮಿ ಸಂಘಟನೆ ಹಾಗೂ ಸರ್ವಂ ಬಿಟ್ಟರೆ ಹಳೆಯ ಸಂಘಟನೆಗಳಾವು ಪಾಲ್ಗೊಂಡಿರಲಿಲ್ಲ. ಕಾರಣ ದುಬಾರಿ ವೆಚ್ಚ. ಒಂದು ಸ್ತಬ್ದ ಚಿತ್ರ ತಯಾರಿಸಲು ಕನಿಷ್ಟವೆಂದರೂ 15 ರಿಂದ 20 ಸಾವಿರ ವೆಚ್ಚವಾಗಲಿದೆ. ಜತೆಗೆ ಇಂದಿನ ಯುವಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ಬೇಸರದ ನುಡಿಗಳನ್ನಾಡಿದರು ಪ್ರವೀಣ್ ಚಂಗಪ್ಪ.
ಮಳೆ ಅಡ್ಡಿ : ಮಧ್ಯಾಹ್ನ 1 ಗಂಟೆ ವೇಳೆಗೆ ಧಾರಾಕಾರ ಮಳೆ ಸುರಿದು ಬಳಿಕ ಸಂಜೆವರೆಗೂ ತುಂತುರು ಮಳೆ ಬಿದ್ದಿದ್ದರಿಂದ ಸ್ತಬ್ದ ಚಿತ್ರ ಮೆರವಣಿಗೆ ತುಸು ಅಡ್ಡಿಯಾಯಿತು. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಬಿಟ್ಟು ಹೊರಬರಲಿಲ್ಲ.
- ಎನ್.ಎನ್. ದಿನೇಶ್