ಸೋಮವಾರಪೇಟೆ, ಅ.9: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಆಯುಧ ಪೂಜೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಯುಧ ಪೂಜೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಅಲಂಕೃತ ವರ್ಕ್‍ಶಾಪ್, ಅಂಗಡಿ ಮುಂಗಟ್ಟುಗಳ ಸ್ಪರ್ಧೆಯಲ್ಲಿ ವಿಶಾಲ್ ಆಟೋ ವರ್ಕ್ ಪ್ರಥಮ ಸ್ಥಾನ ಪಡೆಯಿತು. ಖಾಸಗಿ ವಾಹನ ವಿಭಾಗದಲ್ಲಿ ವಿಶ್ವ ಪ್ರಥಮ, ಸುಜಿತ್ ದ್ವಿತೀಯ ಹಾಗೂ ರಮೇಶ್ ಗೌಡ್ರು ತೃತೀಯ ಸ್ಥಾನ ಗಳಿಸಿದರು.
ಸರಕುಸಾಗಾಣೆ ವಾಹನ ವಿಭಾಗದಲ್ಲಿ ಎಂ.ಬಿ. ಉಮ್ಮರ್ ಪ್ರಥಮ, ಅರುಣ್ ಮ್ಯಾಕ್ಸಿ ದ್ವಿತೀಯ, ಪಟ್ಟಣ ಪಂಚಾಯಿತಿಯ ಟ್ರ್ಯಾಕ್ಟರ್ ಅಲಂಕಾರ ತೃತೀಯ ಸ್ಥಾನ ಪಡೆಯಿತು. ಅತ್ಯುತ್ತಮ ಸ್ಪರ್ಧೆ-ಸೂಪರ್ ತ್ರಿ ಬಹುಮಾನಕ್ಕೆ ಸೋಮವಾರಪೇಟೆಯ ಪೊಲೀಸ್ ಠಾಣೆ ಭಾಜನವಾಯಿತು.
ಸೋಮವಾರಪೇಟೆ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಸಗೋಡು ಚನ್ನಮ್ಮ ಶಾಲೆಯ ವನಸಿರಿ ತಂಡ ಪ್ರಥಮ, ಓಎಲ್‍ವಿ ಕಾನ್ವೆಂಟ್‍ನ ಮೇಘ ತಂಡ ದ್ವಿತೀಯ, ಸಾಂದೀಪನಿ ಶಾಲೆಯ ಕಲಾ ವೈಭವ ತಂಡ ತೃತೀಯ ಸ್ಥಾನ ಗಳಿಸಿದವು.
ಪ್ರೌಢಶಾಲಾ ವಿಭಾಗದಲ್ಲಿ ಮಸಗೋಡು ಚನ್ನಮ್ಮ ಶಾಲೆಯ ಭಾರ್ಗವ ತಂಡ ಪ್ರಥಮ, ಗೌಡಳ್ಳಿ ಸರ್ಕಾರಿ ಪ್ರೌಢಶಾಲೆಯ ಜೀವಿತ ತಂಡ ದ್ವಿತೀಯ, ಓಎಲ್‍ವಿ ಶಾಲೆಯ ಶೈಲಪುತ್ರಿ ತಂಡ ತೃತೀಯ ಸ್ಥಾನ ಪಡೆದವು.
ಕಾಲೇಜು ವಿಭಾಗದಲ್ಲಿ ವಿದ್ಯಾ ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್‍ನ ನಾಟ್ಯಕಲಾ ತಂಡ ಪ್ರಥಮ, ಸಂತ ಜೋಸೆಫರ ಕಾಲೇಜಿನ ಭೂಮಿಕ ತಂಡ ದ್ವಿತೀಯ, ಎಕ್ಸ್-ಓ ಬ್ರೇಕರ್ಸ್ ತಂಡ ತೃತೀಯ ಸ್ಥಾನ ಗಳಿಸಿತು.
ಸಂಘದ ಅಧ್ಯಕ್ಷ ಎ.ಆರ್.ಭರತ್, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ರಂಗಸ್ವಾಮಿ, ಸಹಕಾರ್ಯದರ್ಶಿ ಡ್ಯಾನಿ, ಖಜಾಂಚಿ ವಿನ್ಸೆಂಟ್ ಪಿಂಟೋ, ಉಪಕಾರ್ಯದರ್ಶಿ ರವಿ ಎಂ.ಕೆ., ರೋಹಿತ್ ಕುಕ್ಕೆ ಸುಬ್ರಮಣ್ಯ, ಮಾಗೇರಿ ಹರ್ಷ, ವಿಜಿತ್‍ಕುಮಾರ್, ವಿನ್ಸಿ ಡಿಸೋಜ, ಜಗನ್ನಾಥ್ ಅವರುಗಳು ವಿಜೇತರಿಗೆ ಬಹುಮಾನ ವಿತರಿಸಿದರು.
ಸೂಪರ್ ತ್ರಿ ಬಹುಮಾನವನ್ನು ಜಿ.ಡಿ. ನವೀನ್, ನಗದು ಬಹುಮಾನವನ್ನು ಮಸಗೋಡು ದೇವರಾಜ್, ಕಿಬ್ಬೆಟ್ಟ ಜಗನ್ನಾಥ್, ಸತೀಶ್ ವೀರಪ್ಪ, ವೈ.ಬಿ. ಮಹದೇವ, ಸಿ.ಸಿ. ದಿನೇಶ್, ಎನ್.ಎಸ್. ಶ್ರೀನಿವಾಸ್, ಓಂಪ್ರಕಾಶ್ ಚೌದರಿ ಅವರುಗಳು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಸಮಾರೋಪ ಸಮಾರಂಭ: ತಾ. 7ರಂದು ರಾತ್ರಿ ನಡೆದ ಸಮಾರೋಪ ಸಮಾರಂಭವನ್ನು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿ ಮಾತನಾಡಿ, ಹಬ್ಬಾಚರಣೆಗಳು ಸಾಮರಸ್ಯದ ಸಂಕೇತವಾಗಿದ್ದು, ಕಳೆದ 44 ವರ್ಷಗಳಿಂದ ಮೋಟಾರ್ ಯೂನಿಯನ್‍ನಿಂದ ಅದ್ಧೂರಿಯಾಗಿ ಆಯುಧ ಪೂಜೋತ್ಸವ ಸಂಘಟಿಸುತ್ತಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕಾಳಪ್ಪ, ಗಿರೀಶ್ ಮಲ್ಲಪ್ಪ, ಕೆ.ಟಿ.ಸತೀಶ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಪ್ರಮುಖರಾದ ಎಸ್.ಎನ್.ನಾಗಭೂಷಣ್, ಹರಗ ಉದಯ, ಸೇರಿದಂತೆ ಇತರರು ಉಪಸ್ಥಿತರಿದ್ದರು.