ಸುಂಟಿಕೊಪ್ಪ, ಅ.9: ಯಾವದೇ ಧರ್ಮ, ಜಾತಿ ಎಂಬ ಭೇದ ಭಾವದ ವೈಷಮ್ಯ ತೋರದೆ ಮಾನವೀಯತೆಯ ಸೇವೆಯನ್ನು ಪ್ರತಿಯೊಬ್ಬರೂ ಮಾಡುವ ಗುರಿಯನ್ನು ಹೊಂದಬೇಕು ಎಂದು ಹಾಸನ ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಲೋಕೇಶ್‍ಕುಮಾರ್ ತಿಳಿಸಿದರು.
ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಆಯುಧ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶೀರ್ವಚನ ನೀಡಿದ ಮದರಸದ ಸಿ.ಎಂ.ಹಮೀದ್ ಮೌಲ್ವಿ ಅವರು, ಭಾರತೀಯರಲ್ಲಿ ಇರುವ ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಯಿಂದಾಗಿ ಇಡೀ ಜಗತ್ತು ಭಾರತದತ್ತ ಮುಖ ಮಾಡಿ ನೋಡುತ್ತಿದೆ, ಇದು ನಮ್ಮ ಸಂಸ್ಕ್ರತಿ ಸಂಪ್ರದಾಯವಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗೆ ರಕ್ತದ ಅವಶ್ಯಕತೆ ಇದ್ದಾಗ ಯಾವ ಜಾತಿಯ ರಕ್ತ ಬೇಕು ಎಂದು ಯಾರೂ ಕೇಳುವದಿಲ್ಲ. ಹಾಗೆಯೇ ಹಿಂದೂ, ಮುಸ್ಲಿಂ, ಕ್ರೈಸ್ತರು ಎಂಬ ಭೇದ ಭಾವ ಮಾಡದೇ ನಾವೆಲ್ಲ ಭಾರತೀಯರು ಎಂಬ ಮನೋಭಾವನೆಯಿಂದ ಜೀವನ ಸಾಗಿಸಿದರೆ ಎಲ್ಲೂ ಜಾತಿ, ಧರ್ಮದ ಬಗ್ಗೆ ಕ್ರೋಧ, ವೈಷಮ್ಯಗಳು ಕಂಡು ಬರುವದಿಲ್ಲ. ತಪಸ್ವಿಗಳ, ಸಂತರ, ಸೂಫಿಗಳ ತಪಸ್ಸಿನ ಫಲವಾಗಿ ಇಂದು ನಾವು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಅದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಕುಶಾಲನಗರ ಕ್ರೈಸ್ತ ದೇವಾಲಯದ ಧರ್ಮಗುರು ರೆ.ಫಾ.ಹೇಮಚಂದ್ರ ಮಾತನಾಡಿ, ಸಂಸ್ಕಾರಗಳು ಹಿರಿಯ ಪೀಳಿಗೆಗಳು ಬಿಟ್ಟು ಹೋಗಿರುವ ಬಳುವಳಿಯಾಗಿದ್ದು, ಅನ್ಯೋನ್ಯತೆಯಿಂದ, ಮಾನವೀಯ ಮೌಲ್ಯಗಳಿಂದ ಧರ್ಮ ಉಳಿಯಲಿದೆ. ಹಾಗೆಯೇ ಪರಿಸರ ಉಳಿಯಲಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ವಹಿಸಿದ್ದರು.
ಇದೇ ಸಂದರ್ಭ ನಿವೃತ್ತ ಎಎಸ್‍ಐ ಪಾರ್ಥ ಅವರಿಗೆ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಗಿರಿಜಾ ಉದಯಕುಮಾರ್, ಸಿ.ಚಂದ್ರ, ಸೋಮಯ್ಯ, ರಜಾಕ್, ರೆಹನಾ ಪೈರೋಜ್,ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್,ಆಟೋ ಚಾಲಕರ ಸಂಘದ ಅಧ್ಯಕ್ಷ ಬಿ.ಕೆ.ಪ್ರಶಾಂತ್ ಕುಮಾರ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ.ಪೂವಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಫ್. ಸಭಾಸ್ಟೀನ್, ಕಾರ್ಮಿಕರ ಮತ್ತು ಚಾಲಕರ ಸಂಘದ ಸ್ಥಾಪಕಾಧ್ಯಕ್ಷ ಅಣ್ಣಾ ಶೆರೀಫ್, ಉಧ್ಯಮಿ ಪಿ.ಸಿ.ಮೋಹನ್, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರಾದ ರಾಜು ರೈ, ಸುಂಟಿಕೊಪ್ಪ ಹೋಬಳಿ ಪತ್ರಕರ್ತರ ಸಂಘದ ಬಿ.ಕೆ.ಶಶಿಕುಮಾರ್ ರೈ, ಎಂ.ಎಸ್.ಸುನೀಲ್ ಇತರರು ಇದ್ದರು.
ಮನ್ವಿತಾ ಪ್ರಾರ್ಥಿಸಿ, ಮೋನಿಕ ಸ್ವಾಗತ ನೃತ್ಯ ನೆರವೇರಿಸಿ, ಎಂ.ಎಸ್.ಸುನೀಲ್ ಸ್ವಾಗತಿಸಿ ನಿರೂಪಿಸಿ, ವಂದಿಸಿದರು.