ವೀರಾಜಪೇಟೆ, ಅ. 9: ವೀರಾಜಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಸ್ತುತ ಸಾಲಿನಲ್ಲಿ ರೂ 14,64,000 ಲಾಭ ಬಂದಿದ್ದು ಸಂಘ ಪ್ರಗತಿ ಪಥದಲ್ಲಿ ಮುಂದುವರೆಯುತ್ತಿರುವದರಿಂದ ಈ ಸಾಲಿನಲ್ಲಿ ಸಂಘದ ಸದಸ್ಯರುಗಳಿಗೆ ಶೇ. 14 ರಷ್ಟು ಡಿವಿಡೆಂಡ್ ವಿತರಿಸಲಾಗುವದು. ಸಂಘದ ಇನ್ನಷ್ಟು ಏಳಿಗೆಗಾಗಿ ಸಂಘದೊಂದಿಗೆ ಸದಸ್ಯರುಗಳು ಪರಸ್ಪರ ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಅಮ್ಮಣಿಚಂಡ ರಾಜಾ ನಂಜಪ್ಪ ಹೇಳಿದರು.

ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜಾ ನಂಜಪ್ಪ ಅವರು ಮಾತನಾಡಿ ಸಂಘ 1050 ಸದಸ್ಯರುಗಳನ್ನು ಹೊಂದಿದ್ದು, ವರದಿ ಸಾಲಿನಲ್ಲಿ ರೂ. 50.84 ಕೋಟಿ ವ್ಯವಹಾರ ನಡೆಸಿದೆ. ಸದಸ್ಯರುಗಳಿಗೆ ಕೃಷಿ ಸಾಲ, ಜಾಮೀನು ಸಾಲ, ವಾಹನ ಸಾಲ, ಗೃಹ ಸಾಲ, ಕಟ್ಟಡ ಸಾಲ ಹಾಗೂ ಸದಸ್ಯರೇತರರಿಗೆ ಆಭರಣ, ಪಿಗ್ಮಿ, ಓ.ಡಿ.ಸಾಲ ಸೇರಿದಂತೆ ಸ್ವಸಹಾಯ ಸಂಘಗಳಿಗೂ ಸಾಲವನ್ನು ವಿತರಿಸುತ್ತಿದೆ. ಸದಸ್ಯರು ಗಳು ಸಂಘದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕರ್ನಂಡ ಯು. ಜಯ, ವಾಟೇರಿರ ಎಸ್. ಪೂವಯ್ಯ, ಕುಂಡ್ರಂಡ. ಸಿ. ಜೀವನ್‍ಕುಮಾರ್, ಪಾಲೇಕಂಡ ಸಿ. ಪೊನ್ನಪ್ಪ, ಬಡಕಡ ಎ. ಮಾದಯ್ಯ, ಬೊಳ್ಳಚಂಡ ಎಂ. ಗಣಪತಿ, ಹೆಚ್.ಯು. ಕುಮಾರ್, ಕರ್ನಂಡ ಎಸ್. ಪದ್ಮಿನಿ, ಪಾಲೇಕಂಡ ಎಸ್. ಕಾವೇರಮ್ಮ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುಡ್ಡಾಂಡ ಜೋಯಪ್ಪ, ಮೇಲ್ವಿಚಾರಕ ಶಂಕರ್ ಇತರ ಸಿಬ್ಬಂದಿಗಳು ಹಾಜರಿದ್ದರು.