ಮಡಿಕೇರಿ, ಅ. 9: ರಸ್ತೆ ಅಭಿವೃದ್ದಿ ಹೋರಾಟ ಸಮಿತಿ ವತಿಯಿಂದ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಆಗಲೇಬೇಕೆಂದು ಆಗ್ರಹಿಸಿ ಇಂದು ಸಾರ್ವಜನಿಕರು ಪಟ್ಟಣದ ಮಾರಿಗುಡಿಯಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಪುರಂದರ ಮಾತನಾಡಿ ರಸ್ತೆ ಅಗಲೀಕರಣ ಎಲ್ಲಾ ಪ್ರಕ್ರಿಯೆಗಳೂ ನಡೆಯುತ್ತಿದ್ದು 66 ಅಡಿ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಅನುಮೋದನೆ ಕೋರಲಾಗಿದೆ ಯಾವದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಪಟ್ರಪಂಡ ರಘು ನಾಣಯ್ಯ ಮಾತನಾಡಿ ಪಟ್ಟಣ ದಿನದಿಂದ ದಿನಕ್ಕೆ ಬೃಹದಾಕಾರದಲ್ಲಿ ಬೆಳೆಯುತ್ತಿದೆ. ತಾಲೂಕು ಕೇಂದ್ರವಾಗಿ ಸರ್ಕಾರಿ ಕಚೇರಿಗಳು, ಮಿನಿ ವಿಧಾನಸೌಧ, ದಂತ ವೈದ್ಯಕೀಯ ಕಾಲೇಜುಗಳು, ಪ್ರಥಮ ದರ್ಜೆ ಕಾಲೇಜುಗಳನ್ನು ಹೊಂದಿದ್ದು ಹೊರ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬರುತ್ತಿದೆ. 1964ರಲ್ಲಿ ಅಂತರಾಜ್ಯ ಹೆದ್ದಾರಿ ಎಂದು ಗುರುತಿಸಲಾಗಿದೆ. ಕೇರಳದ ಮಟ್ಟನೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ತೆರಳುವ ಸಂಖ್ಯೆ ಕೂಡ ಹೆಚ್ಚಾಗಿದೆ.
ರಸ್ತೆ ಅಭಿವೃದ್ದಿ ಅಗಲೀಕರದ ಬಗ್ಗೆ ಕಳೆದ ವಾರ ಶಾಸಕ ಕೆ.ಜಿ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಸಂತ ಅನ್ನಮ್ಮ ಶಾಲಾ ಸಭಾಂಗÀಣದಲ್ಲಿ ವರ್ತಕರು ಹಾಗೂ ಕಟ್ಟಡ ಮಾಲೀಕರ ಸಮ್ಮುಖದಲ್ಲಿ ಸಾರ್ವಜನಿಕ ಸಭೆಯಲ್ಲಿ ಸರ್ಕಾರದ ನಿಯಮದ ಪ್ರಕಾರ ರಸ್ತೆಯ ಮಧ್ಯಭಾಗದಿಂದ 40x40 ಅಡಿ ಅಗಲೀಕರಣ ನಡೆಸುವಂತೆ ತಿಳಿಸಿದಾಗ ಚರ್ಚೆಗಳು ನಡೆದು 30x30 ಅಡಿ ಅಗಲೀಕರಣ ನಡೆಸುವಂತೆ ಸಮ್ಮತಿಸಿತ್ತು. ಆದರೆ ಕೆಲವು ಪಟ್ಟಭದ್ರ ಹಿತಾಶಕ್ತಿ ಹೊಂದಿದ ವ್ಯಕ್ತಿಗಳು ಪುನ ಸಭೆ ಸೇರಿ ಅಗಲೀಕರಣ ನಡೆಸದಂತೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರದ ಕಾನೂನನ್ನು ಪಾಲಿಸದಂತೆ ಆಗ್ರಹ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುವದಲ್ಲಿದೆ ಸರ್ಕಾರದ ನಿಯಮವನ್ನು ಪಾಲಿಸುವಂತೆ ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ ಕಳೆದ 50 ವರ್ಷದ ಹಿಂದೆ ಮಾಡಿರುವ ರಸ್ತೆಯನ್ನು ನಾವು ಈಗಲು ಬಳಸುತ್ತಿದ್ದೇವೆ. ರಸ್ತೆ ಅಭಿವೃದ್ದಿ ವಿರೋಧಿ ಸಮಿತಿ ಬೆಟ್ಟ ಪ್ರದೇಶಗಳನ್ನು ಮುಂದಿಟ್ಟುಕೊಂಡು ಅಗಲೀಕರಣಕ್ಕೆ ಅಡ್ಡಗಾಲು ಹಾಕುತ್ತಿದೆ. ಬೆಟ್ಟದ ಬುಡದಲ್ಲಿಯೆ ರೆಸಾರ್ಟ್, ಗಣಿಗಾರಿಕೆ ನಡೆಯುತ್ತಿದ್ದರೂ, ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಳೆದ 6 ವರ್ಷಗಳ ಹಿಂದೆ ಗೋಣಿಕೊಪ್ಪ ರಸ್ತೆಯನ್ನು ಅಗಲೀಕರಣ ಮಾಡಬೇಕಾದರೆ ಯಾವದೇ ವಿರೋಧಿ ಸಮಿತಿಗಳಿರಲಿಲ್ಲ. ಅಗಲೀಕರಣವನ್ನು ವಿರೋಧಿಸುವ ಕೆಲವರು ತಾವು ಸರ್ಕಾರದ ಕಾನೂನನ್ನು ಪರಿಪಾಲಿಸಿ ಉಳಿದವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ಧಾರೆ. ಅಗಲೀಕರಣದ ವಿರುದ್ದ ನ್ಯಾಯಲಯದಲ್ಲಿ ದಾವೆ ಹೂಡಲು ಪ್ರತಿ ವರ್ತಕರು ಹಾಗೂ ಕಟ್ಟಡ ಮಾಲೀಕರಿಂದ ಹಣ ವಸೂಲಿ ದಂಧೆಗೆ ಇಳಿದಿದ್ದಾರೆ, ದಯವಿಟ್ಟು ಯಾರಿಗೂ ನಯಾ ಪೈಸಾ ಹಣ ನೀಡಬೇಡಿ ಎಂದು ಹೇಳಿದರು.
ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಗಳು ಹೆಚ್ಚಾಗುತ್ತಿದೆ. ಕೆಲವು ಜನ ವಿರೋಧಿ ಶಕ್ತಿಗಳು ರಸ್ತೆ ಅಭಿವೃದ್ಧಿಯನ್ನು ವಿರೋಧಿಸುತ್ತಿವೆ. ಪಟ್ಟಣ ಅಭಿವೃದ್ಧಿಆಗಬೇಕಾದರೆ ವಿಶಾಲ ರಸ್ತೆ ಅತ್ಯಾವಶ್ಯಕ ಎಂದು ಹೇಳಿದರು.
ಪ್ರತಿಭಟನಾಕಾರರು ಸರ್ಕಾರದ ಕಾನೂನನ್ನು ಜಾರಿಗೊಳಿಸುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರಿಗೂ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಮಹೇಶ್ ಗಣಪತಿ, ಭವ್ಯ ಚಿಟ್ಟಿಯಣ್ಣ, ಕೊಡವ ಸಮಾಜದ ಅಧ್ಯಕ್ಷ ಚಾಂಚಿರ ನಾಣಯ್ಯ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ, ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಶಶಿಧರನ್, ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಅಯ್ಯಪ್ಪ, ಕನಾಟಕ ಸಂಘದ ಅಧ್ಯಕ್ಷ ಬೆಲ್ಲು ಬೋಪಯ್ಯ, ಪಟ್ಟಣ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.