ಮಡಿಕೇರಿ, ಅ. 9: ಐತಿಹಾಸಿಕ ಹಿನ್ನೆಲೆಯಲ್ಲಿ ಮಡಿಕೇರಿ ದಸರಾಗೆ ತನ್ನದೇ ಆದ ಮೆರುಗು ಇದೆ. ಈ ಹಿಂದೆ ನವರಾತ್ರಿ ಪೂಜೆಯೊಂದಿಗೆ ಕರಗೋತ್ಸವ, ಪಲ್ಲಕ್ಕಿ ಉತ್ಸವದೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಎಲೆಪೇಟೆ (ಈಗಿನ ಮಹದೇವಪೇಟೆ)ಯಲ್ಲಿರುವ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವದರೊಂದಿಗೆ ಉತ್ಸವ ಸಂಪನ್ನಗೊಳ್ಳುತ್ತಿತ್ತು. ಕಾಲಕ್ರಮೇಣ ನವರಾತ್ರಿ ಉತ್ಸವ ರಂಗೇರುವದರೊಂದಿಗೆ ತಲೆಯಲ್ಲಿ ಹೊರುತ್ತಿದ್ದ ಪಲ್ಲಕ್ಕಿ ಹೋಗಿ ಮಂಟಪಗಳು ರೂಪುಗೊಂಡವು.
ವಿಜಯದಶಮಿಯಂದು ಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದವು. ನವರಾತ್ರಿ ಉತ್ಸವದಲ್ಲಿ ನಾಡಿನ ಸಂಸ್ಕøತಿಯನ್ನು ಪರಿಚಯಿಸುವ ಹಾಗೂ ಉತ್ಸವದಲ್ಲಿ ಜನರೆಲ್ಲರೂ ಪಾಲ್ಗೊಳ್ಳಬೇಕೆಂಬ ಉದ್ದೇಶದೊಂದಿಗೆ ಒಂಭತ್ತು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜನೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ಕ್ರೀಡೆ, ಸಾಹಿತ್ಯ ಚಟುವಟಿಕೆಗಳು ಸಮ್ಮಿಳಿತಗೊಂಡಿವೆ. ಬರಬರುತ್ತಾ ದಶಮಂಟಪಗಳು ರೂಪುಗೊಂಡು ಅದ್ಧೂರಿ ವೆಚ್ಚದೊಂದಿಗೆ ಸುರಾಸುರರ ಕಾಳಗದ ಕಥಾ ಹಂದರದಲ್ಲಿ ಕಲಾಕೃತಿಗಳ ಚಲನ-ವಲನಗಳನ್ನೊಳಗೊಂಡ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ಆಗಮಿಸುವವರ ಮನಸಿಗೆ ಮುದ ನೀಡುತ್ತಿದ್ದವು. ಆದರೆ ಈ ಬಾರಿಗೆ ಬಹುತೇಕ ಮಂಟಪಗಳು ತಮ್ಮ ಸ್ಥಳವನ್ನು ಬಿಟ್ಟು ಕದಲಲೇ ಇಲ್ಲ...!
ಪ್ರತಿ ವರ್ಷದಂತೆ ಈ ಬಾರಿಯೂ ದಶಮಂಟಪ ಸಮಿತಿ ವತಿಯಿಂದ ಮಂಟಪಗಳು ತೀರ್ಪುಗಾರಿಕೆ ಪ್ರದರ್ಶನಕ್ಕೆ ಸ್ಥಳ ಹಾಗೂ ಸಮಯ ನಿಗದಿಪಡಿಸಲಾಗಿತ್ತು. ಆದರೆ ಯಾವದೇ ಪ್ರದರ್ಶನ ಸಮಯಕ್ಕೆ ಸರಿಯಾಗಿ ಆಗಲೇ ಇಲ್ಲ. ತೀರ್ಪುಗಾರಿಕೆ ಆಗದೆ ಮಂಟಪದವರು ಪ್ರದರ್ಶನ ನೀಡುವದೂ ಇಲ್ಲ. ಕೆಲವೊಂದು ಮಂಟಪಗಳು ತಮ್ಮ ತಯಾರಿಯ ಪ್ರದರ್ಶನ ನೀಡಿದರು. ಏನೂ ಅರಿಯದ ಜನತೆ ಅದನ್ನೇ ಪ್ರದರ್ಶನವೆಂದುಕೊಂಡು ನೋಡಿ ಖುಷಿಪಟ್ಟರು. ಇನ್ನುಳಿದ ಮಂಟಪಗಳು ತೀರ್ಪುಗಾರರನ್ನು ಕಾಯುತ್ತಲೇ ಸಮಯ ಕಳೆದವು. ‘ಇನ್ನೇನು ಕೆಲವೇ ನಿಮಿಷಗಳಲ್ಲಿ ಪ್ರದರ್ಶನ ಆಗಲಿದೆ’ ಎಂಬ ಸಮಿತಿಯವರ ಘೋಷಣೆಯನ್ನು ಕೇಳುತ್ತಾ ಚಾತಕ ಪಕ್ಷಿಯಂತೆ ನಿದ್ರೆಗೆ ಜಾರುತ್ತಿದ್ದ ಕಣ್ಣನ್ನು ಉಜ್ಜಿಕೊಂಡು ಮಕ್ಕಳು-ಮರಿಯನ್ನು ಎತ್ತಿಕೊಂಡು ಕಾಯುತ್ತಿದ್ದ ಜನರು ಗಂಟೆಗಟ್ಟಲೆ ಕಾದು, ಸುಸ್ತಾಗಿ ಬಸವಳಿದು ಮಂಟಪ ಸಮಿತಿಯವರಿಗೆ ಹಿಡಿಶಾಪ ಹಾಕುತ್ತಾ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು.
ಬೆಳಿಗ್ಗೆ 5 ಗಂಟೆಯವರೆಗೂ ಪ್ರದರ್ಶನಗೊಳ್ಳದೆ ತೀರ್ಪುಗಾರರು ಬಂದೊಡನೆ ಪ್ರದರ್ಶನ ತೋರಿದ ಬಳಿಕ ನಿಂತಿದ್ದ ಸ್ಥಳದಿಂದಲೇ ಕೆಲವು ಮಂಟಪಗಳನ್ನು ಕಳಚಲು ಸಮಿತಿಯವರು ತಯಾರಾದರು. ರಾತ್ರಿ ಬರಲಾಗದವರು ಬೆಳಗ್ಗಿನ ಜಾವ ನೋಡಲೆಂದು ಬಂದವರಿಗೆ ಅಸ್ಥಿಪಂಜರಗಳಂತೆ ಅಲ್ಲಲ್ಲಿ ನಿಂತಿದ್ದ ಮಂಟಪಗಳು ಮಾತ್ರ ಕಾಣಸಿಕ್ಕವು. ಈ ಹಿಂದೆಲ್ಲ ವಿಜಯದಶಮಿಯ ಮರುದಿನ ಮಧ್ಯಾಹ್ನದವರೆಗೂ ಮಂಟಪಗಳ ಮೆರವಣಿಗೆ ಸಾಗಿಬರುತ್ತಿತ್ತು. ಒಂದೆರಡು ಮಂಟಪಗಳು ಮಾತ್ರ ಮೆರವಣಿಗೆ ಪೂರೈಸಿದವು.
ಜನಸಂಖ್ಯೆ ವಿರಳ: ಈ ಬಾರಿಯ ದಸರಾ ಉತ್ಸವಕ್ಕೆ ಸರಕಾರದಿಂದ ರೂ. 1 ಕೋಟಿ ಅನುದಾನ ಬಂದಿದ್ದು, ಆರಂಭದಿಂದಲೇ ಪ್ರಚಾರವಾಗಿತ್ತು. ಕಳೆದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಅನುದಾನವಿಲ್ಲದ್ದರಿಂದ ಸರಳವಾಗಿ ದಸರಾ ಆಚರಿಸಲಾಗಿತ್ತಾದರೂ ಒಂದಿಷ್ಟು ಜನರಿದ್ದರು. ಆದರೆ ಈ ಬಾರಿ ಅದ್ಧೂರಿ ದಸರಾ ಆಚರಣೆ ನಡೆದರೂ ನಿರೀಕ್ಷಿತ ಮಟ್ಟದಲ್ಲಿ ಜನಸಂಖ್ಯೆ ಕಂಡು ಬರಲಿಲ್ಲ. ವರ್ಷಂಪ್ರತಿ ಮುಖ್ಯ ರಸ್ತೆಗಳಲ್ಲಿ ನಡೆದಾಡುವದೇ ಕಷ್ಟಕರವಾಗಿರುತ್ತಿತ್ತು. ಆದರೆ ಈ ಬಾರಿ ಅಂತಹ ನೂಕುನುಗ್ಗಲು ಇರಲಿಲ್ಲ. ಜನರು ತಮ್ಮಿಷ್ಟದಂತೆ ಸಂಚರಿಸುತ್ತಿದ್ದರು.
ಸಮಯ ಪಾಲನೆ ಇಲ್ಲ: ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ದಶಮಂಟಪಗಳಿಗೆ ಇಂತಿಷ್ಟು ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ದಶಮಂಟಪ ಸಮಿತಿಯಿಂದ ಸಮಯ ಹಾಗೂ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ ಯಾವದೇ ಮಂಟಪಗಳು ಸಮಯ ಪಾಲನೆ ಮಾಡುವಲ್ಲಿ ಸಫಲವಾಗಲಿಲ್ಲ. ಮಳೆ ಇಲ್ಲದಿದ್ದರೂ ಹೊರಡಲು ತಡವಾಗಿದೆ. ಸಮಯ ಮೀರಿ ಮಂಟಪಗಳು ಹೊರಡದ್ದರಿಂದ ತೀರ್ಪುಗಾರಿಕೆ ಬೆಳಿಗ್ಗಿನವರೆಗೆ ನಡೆಯಿತು.
ಡಿ.ಜೆ. ಅಬ್ಬರ: ಮಂಟಪಗಳಲ್ಲಿ ಹೆಚ್ಚಾಗಿ ಡಿ.ಜೆ. ಬಳಸಬಾರದೆಂದಿದೆ. ಆದರೂ ಈ ಬಾರಿ ಬಹುತೇಕ ಮಂಟಪಗಳಲ್ಲಿ ಡಿಜೆ ಸಂಗೀತ ಅಬ್ಬರ ಜೋರಾಗಿತ್ತು. ಸಾಂಪ್ರದಾಯಿಕ ವಾಲಗ, ಸಂಸ್ಕøತಿಯನ್ನು ಬಿಂಬಿಸುವ ಸಂಗೀತಗಳು ವಿರಳವಾಗಿದ್ದವು.
ವ್ಯಾಪಾರವಿಲ್ಲ...: ದಸರಾಗೆ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದಿದ್ದರೂ ಒಂದಿಷ್ಟು ಮಂದಿ ನೆರೆದಿದ್ದರು. ದಸರಾಗೆ ಬರುವವರಿಗಾಗಿಯೇ ಸ್ಥಳೀಯರು ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ವ್ಯಾಪಾರಿಗಳು ವಿವಿಧ ಬಗೆಯ ಮಳಿಗೆಗಳನ್ನು ತೆರೆದು ವ್ಯಾಪಾರಕ್ಕಾಗಿ ಅಣಿಯಾಗಿದ್ದರು. ಈ ಬಾರಿ ರಸ್ತೆಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳಿದ್ದವು. ಆದರೆ ವ್ಯಾಪಾರ ಮಾತ್ರ ತೀರಾ ಕಡಿಮೆಯಾಗಿತ್ತು. ಮಕ್ಕಳ ಆಟಿಕೆಗಳು, ಪೀಪಿಗಳು ಮಾತ್ರ ಒಂದಿಷ್ಟು ಬಿಕರಿಗೊಂಡವು.
ಕ್ಯಾಂಟೀನ್, ಅಂಗಡಿ, ಹೊಟೇಲ್ಗಳಲ್ಲಿ ವ್ಯಾಪಾರ ತೀರಾ ಕಡಿಮೆಯಿತ್ತು. ಸಾಮಾನ್ಯವಾಗಿ ಮಧ್ಯರಾತ್ರಿ ನಂತರ ಮಡಿಕೇರಿಯ ಕ್ಯಾಂಟೀನ್, ಹೊಟೇಲ್ಗಳಲ್ಲಿ ತಿನಿಸುಗಳು ಖಾಲಿಯಾಗಿ ಮೈಸೂರು-ಬೆಂಗಳೂರು ಕಡೆಗಳಿಗೆ ತೆರಳುವವರು ಸುಂಟಿಕೊಪ್ಪ, ಕುಶಾಲನಗರದಲ್ಲಿ ಆಹಾರ ಸೇವಿಸಿ ಹಿಂತಿರುಗುತ್ತಿದ್ದರು. ಆದರೆ ಈ ಬಾರಿ ಅಲ್ಲಿಯೂ ಯಾವದೇ ವ್ಯಾಪಾರವಿಲ್ಲದಾಗಿದೆ. ಕುಶಾಲನಗರದ ಹೊಟೇಲ್ ಉದ್ಯಮಿಯೋರ್ವರು ತಯಾರಿಸಿಟ್ಟಿದ್ದ ಮಾಂಸಾಹಾರಿ ಖಾದ್ಯಗಳನ್ನು ವ್ಯಾಪಾರವಿಲ್ಲದೆ ಎಸೆದಿರುವದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಮರುದಿನ ಮಾಂಸ, ಇತ್ಯಾದಿ ಖರೀದಿ ಕೂಡ ಮಾಡಿಲ್ಲವಂತೆ. ಲಾಡ್ಜ್, ಹೋಂಸ್ಟೇಗಳಲ್ಲಿ ಜನರಿಲ್ಲದೆ ಎಲ್ಲ ಖಾಲಿಯಾಗಿದ್ದವು.