ಸೋಮವಾರಪೇಟೆ, ಅ. 7: ಮುಳ್ಳು ಹಂದಿಗಳ ಹಾವಳಿಯಿಂದ ಕಾಳುಮೆಣಸಿನ ಬಳ್ಳಿಗಳು ನಾಶ ವಾಗುತ್ತಿದ್ದು, ಅರಣ್ಯ ಇಲಾಖೆಯ ವರೇ ಸಮಸ್ಯೆಗೆ ಪರಿಹಾರ ಒದಗಿಸಿ ಕೊಡಬೇಕೆಂದು ಕಾರೆಕೊಪ್ಪ, ಬೇಳೂರು ಬಸವನಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ತೋಟಗಳಿಗೆ ಮುಳ್ಳು ಹಂದಿಗಳು ಹಿಂಡು ಹಿಂಡಾಗಿ ಧಾಳಿ ನಡೆಸುತ್ತಿದ್ದು, ಮೆಣಸಿನ ಬಳ್ಳಿಗಳ ಕಾಂಡವನ್ನು ತುಂಡರಿಸುತ್ತಿವೆ. ಪರಿಣಾಮ ಕಾಳು ಮೆಣಸಿನ ಬಳ್ಳಿಗಳು ಒಣಗಿಹೋಗುತ್ತಿದ್ದು, ಬೆಳೆಗಾರರು ಭಾರೀ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೆ, ಮುಳ್ಳು ಹಂದಿ ಹಾವಳಿ ತಡೆಯಲು ಹಾಗೂ ಪರಿಹಾರ ನೀಡಲು ಇಲಾಖೆಯಲ್ಲಿ ಯಾವದೇ ಯೋಜನೆ ಇಲ್ಲ ಎಂದು ಹೇಳುತ್ತಿ ದ್ದಾರೆ. ಈ ಬಾಗದ ಹಲವು ತೋಟಗಳಲ್ಲಿ 20 ರಿಂದ 30 ವರ್ಷಗಳ ಕಾಳುಮೆಣಸಿನ ಬಳ್ಳಿಗಳು ಒಣಗಿಹೋಗುತ್ತಿವೆ ಎಂದು ಕಾಫಿ ಬೆಳೆಗಾರರಾದ ಸುದೀಪ್ ಹೇಳಿದ್ದಾರೆ.
ಕೂಡಲೇ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಯವರು ಬಗೆಹರಿಸಬೇಕು. ತಪ್ಪಿದ್ದಲ್ಲಿ ಈ ಭಾಗದ ಬೆಳೆಗಾರರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಾಫಿ ಬೆಳೆಗಾರರಾದ ಶಿವಶಂಕರ್, ರಾಜೀವ, ದಿಲೀಪ್, ಮಲ್ಲೇಶ್ ಸೇರಿ ದಂತೆ ಇತರರು ಒತ್ತಾಯಿಸಿದ್ದಾರೆ.