ಶ್ರೀಮಂಗಲ, ಅ. 7: ಕೊಡಗಿನಲ್ಲಿ ಇರುವ ಪ್ರತಿಯೊಬ್ಬರು ಕೊಡವ ಭಾಷೆಯನ್ನು ಕಲಿತು ಸಂವಹನ ಸಾಹಿತ್ಯ ರಚನೆಗೆ ಕೊಡವ ಭಾಷೆಯನ್ನೇ ಬಳಸಿದರೆ ಕೊಡವ ಭಾಷೆ ಹಾಗೂ ಸಾಹಿತ್ಯ ಬೆಳೆಯುತ್ತದೆ ಎಂದು ವೀರಾಜಪೇಟೆ ತ್ರಿವೇಣಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಹಾಗೂ ತ್ರೀವೇಣಿ ವಿದ್ಯಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ 25ನೇ ವರ್ಷಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವೀರಾಜಪೇಟೆ ತ್ರಿವೇಣಿ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಕೊಡವ ಭಾಷೆಯಲ್ಲಿ ಪ್ರಬಂಧ, ಕೈಬರಹ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಕೂಟ’ವು ಲಿಪಿ ಇಲ್ಲದಕೊಡವ ಭಾಷೆಯಲ್ಲಿ 160ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿರುವದಲ್ಲದೆ ತನ್ನ 25ನೇ ವರ್ಷಾಚರಣೆಯ ಅಂಗವಾಗಿ 25 ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವದು ಶ್ಲಾಘನೀಯ ಎಂದರು.
ಮತ್ತೋರ್ವ ಮುಖ್ಯ ಅತಿಥಿ ತ್ರಿವೇಣಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಬಿ.ಎಲ್. ಕವಿತಾ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದೊಂದಿಗೆ ಭಾಗವಹಿಸಿ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ‘ಕೂಟ’ದ ವಿವಿಧ ಸಾಧನೆಗಳು ಹಾಗೂ 25ನೆಯ ವರ್ಷಾಚರಣೆಯ ಅಂಗವಾಗಿ ಹಮ್ಮಿ ಕೊಂಡಿರುವ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.