ಶನಿವಾರಸಂತೆ, ಅ. 6: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇಗೋಡು ಗ್ರಾಮದಲ್ಲಿ ಸುಮಾರು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು. ದೇವಸ್ಥಾನವನ್ನು ಜಾತಿ, ಮತ, ಭೇದ, ಭಾವ ಎಣಿಸದೆ ಸಹಭಾಳ್ವೆಯಿಂದ ನಡೆಸಿಕೊಂಡು ಹೋಗುವಂತೆ ತಿಳಿಸಿ, ಸರಕಾರದಿಂದ ಅನುದಾನ ಕೊಡಿಸುವದಾಗಿ ಹಾಗೂ ತಮ್ಮ ವೈಯಕ್ತಿಕವಾದ ಹಣ ಸಹಾಯ ಮಾಡುವದಾಗಿ ಅಪ್ಪಚ್ಚು ರಂಜನ್ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ದೀಪಕ್, ಗ್ರಾ.ಪಂ. ಅಧ್ಯಕ್ಷ ಮುಸ್ತಫಾ, ದಯಾನಂದ, ಊರಿನ ಹಿರಿಯರು, ಯುವಕರು ಹಾಗೂ ಪೊಲೀಸ್ ಠಾಣಾಧಿಕಾರಿ ಕೃಷ್ಣ ನಾಯಕ್ ಉಪಸ್ಥಿತರಿದ್ದರು.