ನಂಜರಾಯಪಟ್ಟಣ, ಅ. 6: ಪ್ರಗತಿಯತ್ತ ಸಾಗುತ್ತಿರುವ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2018-19ನೇ ಸಾಲಿಗೆ ರೂ. 32.91 ಲಕ್ಷಗಳ ಲಾಭಗಳಿಸಿದೆ. ಸಂಘದ ವ್ಯಾಪ್ತಿಗೆ 9 ಗ್ರಾಮಗಳು ಸೇರಿದ್ದು, 2068 ಸದಸ್ಯರುಗಳನ್ನು ಹೊಂದಿದ್ದು, ಪಾಲು ಬಂಡವಾಳ ರೂ. 179.29 ಲಕ್ಷ ಹೊಂದಿರುತ್ತದೆ. 2018-19ನೇ ಸಾಲಿಗೆ ರೂ. 118.31 ಕೋಟಿ ವಹಿವಾಟು ನಡೆಸಿರುವ ಸಂಘ 90.65 ಲಕ್ಷಗಳ ಕ್ಷೇಮನಿಧಿಯನ್ನು, 166.90 ಲಕ್ಷಗಳ ಇತರ ನಿಧಿಯನ್ನು, 1549.54 ಲಕ್ಷಗಳ ಠೇವಣಿಯನ್ನು ಹೊಂದಿರುತ್ತದೆ. ಸಂಘದಿಂದ ವಿವಿಧ ರೀತಿಯ ಸಾಲವನ್ನು ಸದಸ್ಯರಿಗೆ ವಿತರಿಸುತ್ತಿದ್ದು, 2018-19ನೇ ಸಾಲಿಗೆ ರೂ. 975.53 ಲಕ್ಷಗಳ ಕೆ.ಸಿ.ಸಿ. ಸಾಲವನ್ನು, ರೂ. 143.18 ಲಕ್ಷಗಳ ಮಧ್ಯಮಾವಧಿ ಸಾಲವನ್ನು, ರೂ. 312.15 ಲಕ್ಷಗಳ ಜಾಮೀನು ಸಾಲವನ್ನು, ರೂ. 37.29 ಲಕ್ಷಗಳ ವಾಹನ ಸಾಲವನ್ನು ರೂ. 124.32 ಲಕ್ಷಗಳ ಇತರ ಸಾಲವನ್ನು, ರೂ. 215.69 ಲಕ್ಷಗಳ ಆಭರಣ ಸಾಲವನ್ನು ಸದಸ್ಯರಿಗೆ ವಿತರಿಸಿದೆ. ಅಲ್ಲದೆ ಸಂಘದ ಮೂಲಕ 106 ಸ್ವಸಹಾಯ ಸಂಘಗಳನ್ನು ರಚಿಸಿದ್ದು, ರೂ. 24.76 ಲಕ್ಷಗಳ ಠೇವಣಿಯನ್ನು ಸಂಗ್ರಹಿಸಿದ್ದು, ಸಂಘದಿಂದ ರೂ. 89.65 ಲಕ್ಷಗಳ ಸಾಲ ನೀಡಲಾಗಿದೆ. ಈ ಎಲ್ಲಾ ಸಾಲಗಳನ್ನು ಸಂಘದ ಸ್ವಂತ ಬಂಡವಾಳದಿಂದ ವಿತರಿಸಲಾಗುತ್ತಿದ್ದು, 2018-19ನೇ ಸಾಲಿಗೆ ಸದಸ್ಯರಿಂದ ಶೇ. 99.98 ರಷ್ಟು ಸಾಲ ವಸೂಲಾತಿಯಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಸಂಘ ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮದಲ್ಲಿ ದಿನಸಿ ಶಾಖೆಗಳನ್ನು ಹೊಂದಿದ್ದು, ಶಾಖೆಗಳ ಮೂಲಕ ರಸಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ವಸ್ತುಗಳು, ಹತ್ಯಾರು, ಸಿಮೆಂಟ್, ಕೊಂಕಣ್ ಗ್ಯಾಸ್, ನಿಯಂತ್ರಿತ ವಸ್ತುಗಳು ಹಾಗೂ ಮದ್ದು ಗುಂಡುಗಳನ್ನು ಮಾರಾಟ ಮಾಡುತ್ತಿದ್ದು, 2018-19ನೇ ಸಾಲಿಗೆ ರೂ. 656.30 ಲಕ್ಷಗಳ ವ್ಯಾಪಾರ ವಹಿವಾಟು ನಡೆಸಿ ರೂ. 25.83 ಲಕ್ಷಗಳ ಲಾಭ ಗಳಿಸಿರುತ್ತದೆ. ಅಲ್ಲದೆ ಬ್ಯಾಂಕಿನ 3 ಶಾಖೆಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಿದೆ. ವಾಲ್ನೂರು ಶಾಖೆಯಲ್ಲಿ ಸಹಕಾರ ಸಭಾಂಗಣವನ್ನು ನಿರ್ಮಿಸಿದ್ದು, ಸದಸ್ಯರಿಗೆ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. 2 ಟ್ರ್ಯಾಕ್ಟರ್ ಮತ್ತು 1 ಮಿನಿ ಲಾರಿಯನ್ನು ಹೊಂದಿದ್ದು, ರೈತ ಸದಸ್ಯರುಗಳಿಗೆ ಉಳುಮೆ, ಕೃಷಿ ಕೆಲಸ ಮತ್ತು ಸಾಗಾಣಿಕೆಗೆ ರಿಯಾಯಿತಿ ದರದಲ್ಲಿ ಕಳುಹಿಸಲಾಗುತ್ತಿದೆ. ಸಂಘದ ವತಿಯಿಂದ 2 ರೈತ ಕೂಟಗಳನ್ನು ಮತ್ತು 2 ಜಂಟಿ ಭಾದ್ಯತಾ ಗುಂಪನ್ನು ರಚಿಸಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷವೂ ಸಂಘದ ವ್ಯಾಪ್ತಿಯ 10ನೇ ಮತ್ತು 7ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಯೊಂದು ಶಾಲೆಯ 3 ವಿದ್ಯಾರ್ಥಿಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 6 ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುತ್ತಿದೆ.

ಮುಂದಿನ ಸಾಲಿನಲ್ಲಿ ಸಂಘಕ್ಕೆ ನೂತನ ಕಟ್ಟಡವನ್ನು ನಿರ್ಮಿಸಲು, ಸದಸ್ಯರಿಗೆ ಅನುಕೂಲವಾಗುವಂತೆ ಕಾಫಿ ಕ್ಲೀನಿಂಗ್ ಮಿಷನ್ ಖರೀದಿ, ಕಾಫಿ ಡಿಪೋವನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ ಮಾಹಿತಿ ನೀಡಿದ್ದಾರೆ.