ವೀರಾಜಪೇಟೆ, ಅ. 6: ವರ್ಷಂಪ್ರತಿ ಬಾಳುಗೋಡುವಿನ ಕೊಡವ ಸಮಾಜದ ಒಕ್ಕೂಟದ ವತಿಯಿಂದ ಆಯೋಜಿಸುವ ಕೊಡವ ನಮ್ಮೆ ಈ ಬಾರಿ ತಾ. 11 ರಿಂದ 13ರ ವರಗೆ ಬಾಳುಗೋಡುವಿನಲ್ಲಿ ನಡೆಯಲಿದೆ. ಇದರಲ್ಲಿ 31 ಕೊಡವ ಸಮಾಜಗಳು ಭಾಗವಹಿಸಲಿವೆ. ತಾ. 11 ರಂದು ಬೆಳಿಗ್ಗೆ 10 ಗಂಟೆಗೆ ಹಾಕಿ ಪಂದ್ಯಾಟದ ಉದ್ಘಾಟನೆ ಮೂಲಕ ಕೊಡವ ನಮ್ಮೆಗೆ ಚಾಲನೆ ನೀಡಲಾಗುವದು. ಅದೇ ದಿನ ಸಮಾಜದ ಸಭಾ ಭವನದಲ್ಲಿ ಹೆಣ್ಣು ಮಕ್ಕಳಿಗೆ ಹೂ ಜೋಡಣೆ ಪೈಪೋಟಿ, ತರಕಾರಿಯಲ್ಲಿ ಕಲಾಕೃತಿ ಕೆತ್ತನೆ ಸ್ಪರ್ಧೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಕೊಡವ ನಮ್ಮೆಯ ಪ್ರಧಾನ ಸಂಚಾಲಕ ಕಂಬೀರಂಡ ಕಿಟ್ಟು ಕಾಳಪ್ಪ ತಿಳಿಸಿದರು.
ಬಾಳುಗೋಡು ಕೊಡವ ಸಮಾಜದ ಒಕ್ಕೂಟದ ವತಿಯಿಂದ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಳಪ್ಪ ಅವರು ತಾ. 12 ರಂದು ಸಮಾಜದ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಇದರಲ್ಲಿ ಮುಖ್ಯ ಅತಿಥಿಗಳಾಗಿ ಮೇಜರ್ ಜನರಲ್ ಕುಪ್ಪಂಡ ಪೊನ್ನಪ್ಪ ನಂಜಪ್ಪ ಭಾಗವಹಿಸಲಿದ್ದಾರೆ. ನಂತರ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ಸಂಜೆ ವರಗೆ ಹಾಕಿ ಆಟ, ಹಗ್ಗಜಗ್ಗಾಟ, ಭಾರದ ಕಲ್ಲು ಎಸೆಯುವ ಸ್ವರ್ಧೆಗಳು ನಡೆಯುತ್ತದೆ.
ತಾ. 13 ರಂದು ಬೆಳಿಗ್ಗೆ 9ಕ್ಕೆ ಮಂದ್ ಮರಿಯುವ ಕಾರ್ಯಕ್ರಮ, 9.30ಕ್ಕೆ ಕೊಡವ ಸಾಂಸ್ಕøತಿಕ ಪೈಪೋಟಿಯ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಅಪರಾಹ್ನ 2ರ ಬಳಿಕ ಹಾಕಿ ಪಂದ್ಯಾಟದ ಅಂತಿಮ ಪಂದ್ಯಾಟ, ಹಗ್ಗಾಜಗ್ಗಾಟ ಪಂದ್ಯಾಟದ ಅಂತಿಮ ಪಂದ್ಯಗಳು ಹಾಗೂ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.
ಹಾಕಿ ತಂಡದಲ್ಲಿ 9 ಕೊಡವ ಸಮಾಜದ ತಂಡಗಳು ಹೆಸರು ನೋಂದಾಯಿಸಿವೆ. ತಾ. 11 ರಿಂದ ಆರಂಭವಾಗುವ ಪಂದ್ಯಾಟದ ಸೆಮಿಪೈನಲ್ 12 ರಂದು ನಡೆಯಲಿದೆ ಎಂದು ಕಿಟ್ಟು ಕಾಳಪ್ಪ ಹೇಳಿದರು.
ಗೋಷ್ಠಿಯಲ್ಲಿ ತಾಂತ್ರಿಕ ಸಂಚಾಲಕ ಕಾಟುಮಣಿಯಂಡ ಉಮೇಶ್, ಹಗ್ಗ ಜಗ್ಗಾಟದ ಸಂಚಾಲಕ ಬೊಳ್ಳಿಯಂಗಡ ದಾದು ಪೂವಯ್ಯ , ಭಾರದ ಕಲ್ಲು ಎಸೆಯುವ ಆಟದ ಸಂಚಾಲಕ ಕನ್ನಂಬಿರ ಚಿಣ್ಣಪ್ಪ, ಸಮಿತಿ ಸದಸ್ಯರಾದ ಕೂತಂಡ ಸುರೇಶ್ , ಕಬ್ಬಚಿರ ಜ್ಯೋತಿ ಉತ್ತಪ್ಪ ಮತ್ತು ಕುಪ್ಪಂಡ ರಾಜೀವ್ ಕಾರ್ಯಪ್ಪ ಉಪಸ್ಥಿತರಿದ್ದರು.