ಸೋಮವಾರಪೇಟೆ, ಅ. 6: ಸೋಮವಾರಪೇಟೆ ಭಾಗದ ಜನೋತ್ಸವ ಎಂದೇ ಹೆಸರುವಾಸಿಯಾಗಿರುವ, ಮೋಟಾರ್ ಯೂನಿಯನ್ನಿಂದ ಆಚರಿಸುವ ಆಯುಧ ಪೂಜೋತ್ಸವ ಸಮಾರಂಭ ತಾ. 7 ರಂದು (ಇಂದು) ನಡೆಯಲಿದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ಬೆಳಗ್ಗಿನಿಂದ ರಾತ್ರಿಯವರೆಗೂ ವಿವಿಧ ಕಾರ್ಯ ಕ್ರಮಗಳು ಆಯೋಜನೆಗೊಂಡಿವೆ. ಆಯುಧ ಪೂಜೋತ್ಸವ ಅಂಗವಾಗಿ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ನಡೆಯುವ 44ನೇ ವರ್ಷದ ಆಯುಧ ಪೂಜೋತ್ಸವಕ್ಕೆ ತಾ. 7 ರಂದು ಬೆಳಿಗ್ಗೆ 7.30ಕ್ಕೆ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ದೊರೆಯಲಿದ್ದು, 8.30ಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ, 9 ಗಂಟೆಗೆ ಆಯುಧ ಪೂಜಾ ಸಭಾ ಕಾರ್ಯ ಕ್ರಮದ ಉದ್ಘಾಟನೆ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಶಾಲಾ ಮಕ್ಕಳಿಂದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಿದ್ದು, ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಆಯುಧ ಪೂಜಾ ಸಮಾರಂಭ ನಡೆಯಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಮುಖರಾದ ಕೆ.ಟಿ. ಸತೀಶ್, ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ, ಹರಪಳ್ಳಿ ರವೀಂದ್ರ, ಪವನ್ ದೇವಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಅಯುಧ ಪೂಜೋತ್ಸವ ಅಂಗವಾಗಿ ವಾಹನ, ವರ್ಕ್ಶಾಪ್, ಅಂಗಡಿ, ಸರ್ಕಾರಿ ಕಚೇರಿಗಳ ಅಲಂಕೃತ ಸ್ಪರ್ಧೆ ಆಯೋಜಿಸಲಾಗಿದೆ. ಇದರೊಂದಿಗೆ ಮಂಗಳೂರಿನ ನೃತ್ಯ ಶಿವಂ ಕಲಾ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಡ್ಯಾನ್ಸ್-ಡ್ಯಾನ್ಸ್, ಅಲಂಕೃತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.