ಮಡಿಕೇರಿ, ಅ. 6: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಇಂದು ನಗರದಲ್ಲಿ ವಿಜಯದಶಮಿ ಪ್ರಯುಕ್ತ ಘೋಷ್ ಸಹಿತ ನಡೆದ ಪಥ ಸಂಚಲನದಲ್ಲಿ ಜಿಲ್ಲೆಯ ಶಾಸಕತ್ರಯರು ಕಾಣಿಸಿಕೊಂಡರು.ಎಂ.ಪಿ. ಸುನಿಲ್ ಸುಬ್ರಮಣಿ, ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳು ಸಂಘದ ಗಣವೇಷ ಧರಿಸಿ ಮಡಿಕೇರಿಯ ರಾಜ ಬೀದಿಗಳಲ್ಲಿ ಸಾಗಿದರು. ದಸರಾ ನಾಡ ಹಬ್ಬದ ನಡುವೆ ಸಂಘ ವಿಜಯ ದಶಮಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನೇಕರು ಜನಪ್ರತಿನಿಧಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.‘ನಾವು ಯಾವ ಜಿಲ್ಲೆಯಲ್ಲಿ ಕೆಲಸ ಮಾಡುತ್ತೇವೋ ಆ ಜಿಲ್ಲೆಯ ಹಬ್ಬಗಳು ನಮ್ಮ ಹಬ್ಬಗಳು; ಹಾಗೆಯೇ ಮಡಿಕೇರಿ ದಸರಾ ಕೂಡ ನಮ್ಮದು; ಇಲ್ಲಿಯ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಉಡುಗೆ ಧರಿಸುವ ಆಸೆ ಬಹಳ ದಿನದಿಂದ ಇತ್ತು. ಹಾಗಾಗಿಯೇ ಸರಕಾರಿ ರಜಾ ದಿನವಾದ ಇಂದು ಮಹಿಳಾ ದಸರಾ ಆಯೋಜಿಸಿ ಈ ಉಡುಪಿನಲ್ಲಿ ಪಾಲ್ಗೊಂಡಿದ್ದೇವೆ’ ಇದು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಂತಸದ ಮಾತು.ಹುಟ್ಟು ಹಬ್ಬ ಆಚರಿಸಿಕೊಂಡ ಶಾಸಕಿ ವೀಣಾ ಅಚ್ಚಯ್ಯನವರೊಂದಿಗೆ ಎಸ್‍ಪಿ ಸುಮನ್ ಡಿ. ಪಣ್ಣೇಕರ್ ಹಾಗೂ ಸಿಇಓ ಲಕ್ಷ್ಮೀಪ್ರಿಯ ಅವರುಗಳೂ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಬಂದಿದ್ದು, ಎಲ್ಲರನ್ನೂ ಆಕರ್ಷಿಸಿತು. ನೂರಾರು ಮಂದಿ ಮೂವರೊಂದಿಗೂ ‘ಸೆಲ್ಫಿ’ಗಾಗಿ ಮುಗಿ ಬೀಳುತ್ತಿದ್ದುದು ವಿಶೇಷ ಆಕರ್ಷಣೆ.