ಸೋಮವಾರಪೇಟೆ, ಅ. 6: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಾ. 18ರಂದು ಸೋಮವಾರಪೇಟೆ ಪಟ್ಟಣದಲ್ಲಿ ಕಾವೇರಿ ತೀರ್ಥ ವಿತರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 18ರಂದು ಪೂರ್ವಾಹ್ನ 10.30ಕ್ಕೆ ಹರಪಳ್ಳಿ ರವೀಂದ್ರ ಅವರು ಪಟ್ಟಣದ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಿದ್ದಾರೆ. 12.30ಕ್ಕೆ ನಗರದ ಜೇಸೀ ವೇದಿಕೆಯಲ್ಲಿ ಸಾರ್ವಜನಿಕರಿಗೆ ಸಂಘದ ವತಿಯಿಂದ ಕಾವೇರಿ ತೀರ್ಥ ವಿತರಣೆ ಮಾಡಲಾಗುವದು ಎಂದು ನಾಗರಾಜ್ ಮಾಹಿತಿ ನೀಡಿದರು. ಕಳೆದ 4 ವರ್ಷದಿಂದ ಸಂಘದ ವತಿಯಿಂದ ತೀರ್ಥ ವಿತರಣೆ ನಡೆಸಿಕೊಂಡು ಬಂದಿದ್ದು, ತಾ. 17ರ ರಾತ್ರಿ ತಲಕಾವೇರಿಗೆ ತೆರಳಿ ತೀರ್ಥವನ್ನು ಸಂಗ್ರಹಿಸಿ, ತಾ. 18ರಂದು ಸೋಮವಾರಪೇಟೆಯಲ್ಲಿ ತೀರ್ಥ ವಿತರಿಸಲಾಗುವದು ಎಂದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಹೆಚ್.ಬಿ. ರಾಜಪ್ಪ, ಹೆಚ್.ಓ. ಪ್ರಕಾಶ್, ಹೆಚ್.ಎನ್. ಮಣಿಕಂಠ, ಹೆಚ್.ಓ. ಚನ್ನಯ್ಯ, ರೈತ ಸಂಘದ ಚಂದ್ರಪ್ಪ ಅವರುಗಳು ಉಪಸ್ಥಿತರಿದ್ದರು.