ವೀರಾಜಪೇಟೆ, ಅ. 4: ವೀರಾಜಪೇಟೆ ಬಳಿಯ ಬೇತರಿ ಹೆಮ್ಮಾಡು ಗ್ರಾಮದ ಟಿ.ಎಲ್. ಸುಬ್ಬಯ್ಯ ಎಂಬುವರಿಗೆ ಅವರ ಸಂಬಂಧಿಕರಾದ ಭೀಮಪ್ಪ ಅಲಿಯಾಸ್ ಸುರೇಶ್ ಎಂಬವರು ಅಪ್ಪಾಜಿಯವರ ತೋಟದ ಜಂಕ್ಷನ್ ಬಳಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಐ.ಪಿ.ಸಿ.1860 (ಯು/ಎಸ್ 307) ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿ ಭೀಮಪ್ಪನನ್ನು ಬಂಧಿಸಿದ್ದಾರೆ.
ಸುಬ್ಬಯ್ಯ ಹಾಗೂ ಭೀಮಪ್ಪ ಸಂಬಂಧಿಕರಾಗಿದ್ದು ಇಬ್ಬರ ನಡುವೆ ಆಸ್ತಿ ವಿಷಯದಲ್ಲಿ ವೈಷಮ್ಯ ವಿದ್ದುದರಿಂದ ಭೀಮಪ್ಪ ಕೊಲೆಗೆ ಪ್ರಯತ್ನಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಗುಂಡು ಹಾರಿಸುವ ಸಮಯದಲ್ಲಿ ಸುಬ್ಬಯ್ಯ ತಪ್ಪಿಸಿಕೊಂಡಿದ್ದರಿಂದ ಪ್ರಾಣಾಪಾಯ ದಿಂದ ಪಾರಾಗಿರುವದಾಗಿ ದೂರಿನಲ್ಲಿ ತಿಳಿಸಿದ್ದು ಸ್ಥಳದಲ್ಲಿಯೇ ಮುರಿದು ಬಿದ್ದಿದ್ದ ಒಂಟಿ ನಳಿಗೆ ಕೋವಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.