ಮಡಿಕೇರಿ, ಅ. 4: ಪ್ಲಾಸ್ಟಿಕ್ ಬಳಕೆ ನಿಷೇದ ಮಾಡುವ ಬಗ್ಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಹುಟ್ಟುಹಬ್ಬದ ಸಲುವಾಗಿ ಸಾರ್ವಜನಿಕರಿಗೆ ಒಂದು ಬಾರಿ ಉಪಯೋಗಿಸಿದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಪ್ಲಾಸ್ಟಿಕ್ ಮುಕ್ತ ಆಂದೋಲನ’ ಸ್ವಚ್ಛತೆಯೇ ಸೇವೆ ಜನ ಜಾಗೃತಿ ಕಾರ್ಯಕ್ರಮವನ್ನು ತಾ. 27 ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಜಿ.ಪಂ. ಸಿ.ಇ.ಓ. ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು. ಪ್ರಧಾನಮಂತ್ರಿ ಆಶಯದಂತೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಒಮ್ಮೆ ಉಪಯೋಗಿಸಿದ ಪ್ಲಾಸ್ಟಿಕ್ಗಳಾದ ಪ್ಲಾಸ್ಟಿಕ್ ತಟ್ಟೆ, ಗ್ಲಾಸ್, ಸ್ಟ್ರಾ, ಬ್ಯಾಗ್, ಬಾಟಲ್, ಸ್ಯಾಚೆಟ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಜಿಲ್ಲೆ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೊಡಗು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಸ್ವಚ್ಛ ಮೇವ ಜಯತೇ, ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ, ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮತ್ತು ವಿಲೇವಾರಿ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸ್ವಚ್ಛತಾ ರಥ ಮತ್ತು ಬೀದಿ ನಾಟಕ ಮುಖಾಂತರ ಜಾಗೃತಿ ಮೂಡಿಸಲಾಗಿದೆ.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪ್ರತಿಜ್ಞಾ ವಿಧಿ ಭೋದನೆ ಮಾಡುವದು ಹಾಗೂ ಫಿಟ್ ಇಂಡಿಯ ಆಂದೋಲನದಿಂದ ನಮ್ಮ ಪರಿಸರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯವನ್ನು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ‘ಸ್ವಾಸ್ಥ ಆರೋಗ್ಯ ಮತ್ತು ಸ್ವಚ್ಛ ಪರಿಸರ ನಿರ್ಮಾಣ’ ಮಾಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬರುವ ಎಲ್ಲಾ ರಸ್ತೆಗಳಲ್ಲಿ, ಅಂಗನವಾಡಿ, ಶಾಲೆ, ಸಮುದಾಯ ಭವನ ಸರ್ಕಾರಿ ಇಲಾಖೆ, ಕಲ್ಯಾಣ ಮಂಟಪ, ಹೋಂಸ್ಟೇ, ರೆಸಾರ್ಟ್, ಹೊಟೇಲ್, ಅಂಗಡಿ, ತರಕಾರಿ ಮತ್ತು ಮಾಂಸ-ಮೀನು, ಮಳಿಗೆಗಳಲ್ಲಿ ಶ್ರಮದಾನ ಮುಖಾಂತರ ಪ್ಲಾಸ್ಟಿಕ್ ತ್ಯಾಜ್ಯ ಹೆಕ್ಕುವ ಚಳುವಳಿ ಹಮ್ಮಿಕೊಳ್ಳುವದು ಮತ್ತು ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ಅವುಗಳನ್ನು ಪ್ರತ್ಯೇಕಿಸುವದು. ಸಾಧ್ಯವಾದಲ್ಲಿ ಅದನ್ನು ಸಂಗ್ರಹಿಸುವದು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯಿತಿ ಸಹಯೋಗ ದೊಂದಿಗೆ ಸ್ವ ಸಹಾಯ ಸಂಘ, ಸ್ತ್ರೀ ಶಕ್ತಿ, ಯುವಕ-ಯುವತಿಯರ ಸಂಘ, ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರು ಮತ್ತು ಗ್ರಾಮಸ್ಥರು ಕೈಜೋಡಿಸಬೇಕು. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪೂರ್ವ ತಯಾರಿ ಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿ.ಪಂ. ಸಿಇಓ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.