ಗೋಣಿಕೊಪ್ಪಲು, ಅ. 4: ಶ್ರೀ ಸದ್ಗುರು ಸಾಯಿ ಶಂಕರ್‍ರವರು 1967 ರಲ್ಲಿ ಬಡ ಜನತೆಯ ಆದಿವಾಸಿಗಳಿಗೆ ಮನೆ ನಿರ್ಮಿಸಿ ಇವರ ಅಭಿವೃದ್ಧಿಗೆ ಶ್ರಮಿಸಿದ್ದ ಗ್ರಾಮಕ್ಕೆ ತೆರಳಿ ಅಲ್ಲಿನ ನಿವಾಸಿಗಳಿಗೆ ನುರಿತ ವೈದ್ಯರಿಂದ ವೈದ್ಯಕೀಯ ಪರೀಕ್ಷೆ, ತೆಂಗಿನ ಗಿಡ ವಿತರಣೆ ಸೇರಿದಂತೆ 150 ಮನೆಗಳಿಗೆ ಕಂಬಳಿ ಬಟ್ಟೆ ಸೇರಿದಂತೆ ಆಹಾರದ ಕಿಟ್‍ಗಳನ್ನು ವಿತರಿಸುವ ಮೂಲಕ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯ ವತಿಯಿಂದ ಕೊಡಗಿನ ಗಡಿ ಸಮೀಪದ ಗ್ರಾಮವಾದ ಉತ್ತೇನಹಳ್ಳಿಗೆ ತೆರಳಿದ ಸಂಸ್ಥೆಯ ವಿದ್ಯಾರ್ಥಿಗಳು ಅಧ್ಯಾಪಕರು ಹಾಗೂ ಸಿಬ್ಬಂದಿಗಳು ಉತ್ತೇನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿದರು. ಗ್ರಾಮದ ನೂರಾರು ಮಂದಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಂಡರು. ವೀರಾಜಪೇಟೆಯ ಕೊಡಗು ದಂತ ಮಹಾವಿದ್ಯಾಲಯ ವತಿಯಿಂದ ದಂತ ಚಿಕಿತ್ಸೆ ನೀಡಲಾಯಿತು. ಗ್ರಾಮದ ಶಾಲೆಯ ಆವರಣದಲ್ಲಿ ತೆಂಗಿನ ಗಿಡಗಳನ್ನು ನೆಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಪ್ರತಿ ಮನೆಗಳಿಗೆ ತೆಂಗಿನ ಗಿಡ ವಿತರಿಸಲಾಯಿತು. ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ಸ್ತ್ರೀ ರೋಗ ತಜ್ಞೆ ಸೋನಿಯಾ ಮಂದಪ್ಪ ಉದ್ಘಾಟಿಸಿ ಮಾತನಾಡುತ್ತ ಗ್ರಾಮದಲ್ಲಿ ಸೇವೆ ನೀಡಲು ವೈದ್ಯರ ತಂಡ ಮುಂದೆ ಬಂದಿದೆ. ಮಹಿಳೆಯರಲ್ಲಿ ಯಾವದೇ ಸಮಸ್ಯೆಗಳಿದ್ದರೂ ವೈದ್ಯರ ಬಳಿ ಹೇಳಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಗ್ರಾಮದಲ್ಲಿ ಶುಚಿತ್ವ ಕಾಪಾಡಬೇಕು ಗಾಂಧೀಜಿಯವರ ಕನಸು ನನಸಾಗಿಸುವಂತೆ ಎಲ್ಲರು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆಯ ಸಾಯಿ ಶಂಕರ್ ಟ್ರಸ್ಟ್‍ನ ಅಧ್ಯಕ್ಷ ಕೋಳೇರ ಝರು ಗಣಪತಿ ಮಾತನಾಡಿ 1967ರಲ್ಲಿ ಸದ್ಗುರುಗಳು ಈ ಪ್ರದೇಶಕ್ಕೆ ಆಗಮಿಸಿ ಇಲ್ಲಿಯ ಮೂರು ಹಳ್ಳಿಗಳನ್ನು ದತ್ತು ತೆಗೆದು ಕೊಂಡಿದ್ದರು. ಇಲ್ಲಿಯ ಆದಿವಾಸಿಗಳ ಬದುಕಿಗೆ ಆಸರೆಯಾ ಗಿದ್ದರು. ಈ ಪ್ರದೇಶದಲ್ಲಿ ವಾಸ ಮಾಡುವ ಜನತೆಗೆ 150 ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಈ ಹಳ್ಳಿಯು ಇನ್ನಷ್ಟು ಅಭಿವೃದ್ಧಿ ಕಾಣಬೇಕಾಗಿದೆ. ಸದ್ಗುರುಗಳ ನೆನಪಿನಲ್ಲಿ ಟ್ರಸ್ಟ್ ವತಿಯಿಂದ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ ಕಾಡ್ಯಮಾಡ ನೇವಿನ್, ಖಜಾಂಚಿ ಅಜ್ಜಿಕುಟ್ಟಿರ ಸಜನ್, ರೋಟೇರಿಯನ್ ಡಾ. ಚಂದ್ರಶೇಖರ್, ರೋಟೇರಿಯನ್ ನರೇಂದ್ರ, ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಬೊಟ್ಟಂಗಡ ದಶಮಿ ಮುಖ್ಯೋಪಾ ಧ್ಯಾಯಿನಿ ವೀಣಾ ರಾಜಪ್ಪ, ಉಮಾ, ನಿರ್ದೇಶಕರಾದ ಅರಮಣಮಾಡ ಸತೀಶ್, ಮಲ್ಚೀರ ಕವಿತಾ, ಕೊಂಗಂಡ ಮಮತಾ, ತೀತಿರ ಊರ್ಮಿಳಾ, ಪುಳ್ಳಂಗಡ ಸರಳ, ದಂತ ವೈದ್ಯಕೀಯ ಕಾಲೇಜಿನ ಗಣೇಶ್, ಶಾರದಾ ಪ್ರೌಢ ಶಾಲೆಯ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಯ್ಯಣ್ಣ, ಸಂಸ್ಥೆಯ ವ್ಯವಸ್ಥಾಪಕಿ ರಮ್ಯ, ನಾರಾಯಣ್ ಪ್ರಾದ್ಯಾಪಕರಾದ ತಿಮ್ಮಯ್ಯ ಮುಂತಾದವರು ಹಾಜರಿದ್ದರು.

ಸಂಸ್ಥೆಯ ಶಿಕ್ಷಕರಾದ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ನಿತಿ.ಪಿ. ಸ್ವಾಗತಿಸಿ, ವಂದಿಸಿದರು. ಗ್ರಾಮದ ನೂರಾರು ಜನತೆ ವೈದ್ಯಕೀಯ ಚಿಕಿತ್ಸೆಯ ಪ್ರಯೋಜನ ಪಡೆದರು.

- ಹೆಚ್.ಕೆ. ಜಗದೀಶ್