ಕುಶಾಲನಗರ, ಅ. 4: ಜಿಲ್ಲೆಯಿಂದ ಅಕ್ರಮವಾಗಿ ಟೆಂಪೋ ಟ್ರಾವೆಲ್ಲರ್ ವಾಹನವೊಂದರಲ್ಲಿ ಬೀಟೆ ಮರ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮರ ಮತ್ತು ವಾಹನ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಕುಶಾಲನಗರ ಅರಣ್ಯ ವಲಯಾಧಿಕಾರಿ ಅನನ್ಯ ಕುಮಾರ್, ಉಪ ಅರಣ್ಯ ವಲಯಾಧಿಕಾರಿ ಕನ್ನಂಡ ರಂಜನ್, ಅನಿಲ್ ಡಿಸೋಜ ನೇತೃತ್ವದ ತಂಡ ಆರೋಪಿಗಳ ವಾಹನವನ್ನು ಬೆನ್ನಟ್ಟಿ ಕುಶಾಲನಗರ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ನಡೆದಿದ್ದು ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವಲರ್ (ಕೆಎ.01.ಬಿ.5066) ರಲ್ಲಿ ಸುಮಾರು ರೂ.5 ಲಕ್ಷ ಮೌಲ್ಯದ ಬೀಟೆ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭ ಬಸವನಹಳ್ಳಿ ಬಳಿ ವಾಹನವನ್ನು ಇಲಾಖೆ ಅಧಿಕಾರಿಗಳು ಅಡ್ಡಗಟ್ಟಿದರೂ ನಿಲ್ಲಿಸದೆ ಪರಾರಿ ಯಾಗಲು ಯತ್ನಿಸಿದ ಸಂದರ್ಭ ಕುಶಾಲನಗರ ಕೊಪ್ಪ ಗೇಟ್ ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಾಹನದಿಂದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು ಈ ಸಂದರ್ಭ ವಶಕ್ಕೆ ತೆಗೆದುಕೊಂಡಿದ್ದು ಮೈಸೂರಿನ ಎನ್.ಆರ್.ಮೊಹಲ್ಲದ ಜಿಯಾವುಲ್ಲ ಮತ್ತು ಅಬ್ದುಲ್ ರೆಹಮಾನ್ ಎಂಬವರುಗಳನ್ನು ವಿಚಾರಣೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ವಲಯಾಧಿಕಾರಿಗಳಾದ ಕನ್ನಂಡ ರಂಜನ್, ಅನಿಲ್ ಡಿಸೋಜ, ಅರಣ್ಯ ರಕ್ಷಕರಾದ ಸಚಿನ್, ಮಂಜೇಗೌಡ, ವೀಕ್ಷಕರಾದ ದಿನೇಶ್, ಧರ್ಮರಾಜು, ಚಾಲಕ ನಾರಾಯಣ್ ಪಾಲ್ಗೊಂಡಿದ್ದರು.